ಗುಳೇ ಹೋಗೋದೇ ಉಳಿದಿರುವ ದಾರಿ ವಿಜಯನಗರದ ಕೂಡ್ಲಿಗಿಯ ಈ ಲಮಾಣಿ ಜನಾಂಗಕ್ಕೆ

ಗುಳೇ ಹೊರಟವರ ಗೋಳು ಕೇಳಿ! Migration is the last resort for these triable Lamanis.

ಇವರೆಲ್ಲಾ ಗುಳೆ ಹೊರಟಿದ್ದಾರೆ. ಯಸ್‌, ತುತ್ತು ಅನ್ನವನ್ನ ಅರಸಿಕೊಂಡು ಮಕ್ಕಳು ಮರಿ ಕಟ್ಟಿಕೊಂಡು ಊರೇ ಬಿಡುತ್ತಿದ್ದಾರೆ.

ಹುಟ್ಟಿದ ಊರಲ್ಲಿ ತಿನ್ನಲು ಕೂಳಿಲ್ಲ. ಕೈಗಳಿಗೆ ಕೂಲಿಯೂ ಸಿಗುತ್ತಿಲ್ಲ. ಹೊಟ್ಟೆ ಹಸಿವು ಕೇಳುತ್ತಿಲ್ಲ. ಕೊರೋನಾದಿಂದ ಜೀವನ ಇನ್ನೂ ಬರ್ಬಾದ್‌ ಆಗಿದೆ. ಹಾಗಾಗಿ ಬೇರೆ ಊರಿಗೆ ಗುಳೆ ಹೋಗಲೇ ಬೇಕಾಗಿದೆ ಅಂತಾರೆ ಕೂಡ್ಲಿಗಿಯ ಲಮಾಣಿ ತಾಂಡದ ಅಸಹಾಯಕ ಮಂದಿ

ಕೂಡ್ಲಿಗಿ ಪಟ್ಟಣದ ಗೋವಿಂದ ಗಿರಿತಾಂಡ, ಬಂಡೇ ಬಸಾಪುರ ತಾಂಡ ಸೇರಿದಂತೆ ಮೂರು ನಾಲ್ಕು ತಾಂಡದಿಂದ ಈಗಾಗ್ಲೇ ಒಂದಲ್ಲಾ ಎರಡಲ್ಲಾ ಎರಡು ಸಾವಿರ ಮಂದಿ ಗುಳೆ ಹೋಗಿದ್ದಾರೆ. ಇವರೆಲ್ಲಾ ಮಂಡ್ಯ, ಮೈಸೂರು ಭಾಗದಲ್ಲಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಿದ್ದಾರೆ.

ಇನ್ನೂರು ಮುನ್ನೂರು ರೂಪಾಯಿ ಕೂಲಿಗಾಗಿ ಮನೆ ಮಠವನ್ನೆಲ್ಲಾ ತೊರೆದು, ಹಿರಿಯ ಜೀವಗಳನ್ನು ಮನೆಯಲ್ಲಿಯೇ ಬಿಟ್ಟು ದೂರದೂರಿಗೆ ಗುಳೆ ಹೊರಟಿದ್ದಾರೆ. ಇವರ ಜೊತೆ ಪುಟ್ಟ ಪುಟ್ಟ ಮಕ್ಕಳೂ ಶಿಕ್ಷಣವನ್ನು ಬಲಿಕೊಟ್ಟು ತುತ್ತಿನ ಚೀಲ ತುಂಬಿಸಲು ಹೊರಟಿದ್ದಾರೆ.

ಗುಳೆ, ಜನರ ವಲಸೆ ತಡೆಯುವ ಸಲುವಾಗಿಯೇ ಗ್ರಾಮಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ನರೇಗಾ ಜಾರಿಗೆ ತರಲಾಗಿದೆ. ಆದ್ರೆ ಅದ್ರಲ್ಲಿ ನಡೆಯುತ್ತಿರುವ ಭಾರೀ ಭ್ರಷ್ಟಾಚಾರದಿಂದ ಇವರಿಗೆಲ್ಲಾ ಉದ್ಯೋಗವೇ ಇಲ್ಲದಂತಾಗಿದೆ.

ಹೊಲ ಗದ್ದೆ ಕೆರೆ ಕಟ್ಟೆಗಳಿಲ್ಲ ಈ ಮಂದಿ ಬದುಕಿನ ಬಂಡಿ ಸಾಗಿಸಲು ಇಂಥಾ ಕಠಿಣ ನಿರ್ಧಾರ ಮಾಡುತ್ತಿದ್ದಾರೆ. ಅದೂ ಈ ಕೋರೋನಾ ಕಾಲದಲ್ಲಿ ಜೀವವನ್ನೇ ಪಣವಾಗಿಟ್ಟು ಹಸಿವಿನ ನೋವು ನೀಗಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಈ ಲಮಾಣಿ ಮಂದಿ ಇಂದಿಗೂ ಗುಳೆ ಹೋಗುತ್ತಿದ್ದಾರೆ ಅಂದ್ರೆ ನಮ್ಮ ದೇಶದಲ್ಲಿ ಜಾರಿಗೆ ಬಂದಿರುವ ಸಮಾಜ ಕಲ್ಯಾಣ ಯೋಜನೆಗಳು ಯಾವ ರೀತಿ ಭ್ರಷ್ಟರಿಂದ ನೆಲಕಚ್ಚಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.

ಸಮಾಜ ಕಲ್ಯಾಣ ಸಚಿವರ ಜಿಲ್ಲೆಯಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಲಮಾಣಿಗಳ ಪರಿಸ್ಥಿತಿ ಇಷ್ಟು ಹೀನಾಯಮಟ್ಟಕ್ಕೆ ತಲುಪಿದೆ ಅಂದ್ರೆ ಇನ್ನು ಉಳಿದ ಜಿಲ್ಲೆಗಳ ಗತಿ ಏನು. ವಿಜಯನಗರದ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರೂ ಎಚ್ಚೆತ್ತುಕೊಂಡು ಈ ಜನರ ನೋವಿಗೆ ಸ್ಪಂದಿಸಬೇಕಿತ್ತು. ಆದ್ರೆ ಅದೂ ಆಗಿಲ್ಲ.

ಗುಳೆ ತಡೆಯಲು ಉದ್ಯೋಗ ಸೃಷ್ಟಿ ಯಾಗಬೇಕಿದೆ. ಗುಳೇ ಹೋಗುವುದರಿಂದ ಯುವ ಪೀಳಿಗೆ ಶಿಕ್ಷಣದಿಂದ ವಂಚಿತವಾಗುತ್ತೆ. ವೃದ್ಧರು ಅನಾರೋಗ್ಯಕ್ಕೆ ತುತ್ತಾಗಿ ಅನಾಥರಾಗಿ ಕೊನೆಯುಸಿರು ಎಳೆಯುವಂತಾಗುತ್ತಿದೆ. ವಲಸೆಯಿಂದ ಕೊರೋನಾ ಭೀತಿ ಇಡೀ ಜಿಲ್ಲೆಗೆ ಕಾಡಲಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆದಷ್ಟು ಬೇಗ ಎಚ್ಚೆತ್ತುಕೊಂಡು ಈ ಗುಳೆ ಪದ್ಧತಿಗೆ ಬ್ರೇಕ್‌ ಹಾಕಲು ಜನರ ಕೈಗೆ ಕೆಲಸ ಕೊಡಲಿ ಅನ್ನೋದು ವಿಜಯಟೈಮ್ಸ್ ಆಗ್ರಹ

ಕೂಡ್ಲಿಗಿಯಿಂದ ವೃಷಭೇಂದ್ರ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್‌

Exit mobile version