ರಾಜ್ಯ ಸರ್ಕಾರ ‘ಟೇಕ್ ಆಫ್’ ಅಲ್ಲ ಸಂಪೂರ್ಣ ‘ಆಫ್ ಆಗಿ’ ನಡು ರಸ್ತೆಯಲ್ಲಿ ನಿಂತಿದೆ: ಸಿದ್ದರಾಮಯ್ಯ

ಬೆಂಗಳೂರು, ಫೆ. 03: ರಾಜ್ಯ ‌ಸರ್ಕಾರದ‌ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ‘ಟೇಕ್ ಆಫ್’ ಅಲ್ಲ ಸಂಪೂರ್ಣ ‘ಆಫ್ ಆಗಿ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಹಳೆ ಡಕೋಟ ಬಸ್ ನಂತಾಗಿದೆ ಎಂದು ಟೀಕಿಸಿದ್ದಾರೆ.

ಸದನದಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಂದ ಸರ್ಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ, ಒಂದಷ್ಟು ತಪ್ಪು ಮಾಹಿತಿಗಳಿವೆ, ಜೊತೆಗೆ ಸರ್ಕಾರದ ಮಾನ ಉಳಿಸಿಕೊಳ್ಳಲು ನಿರ್ಲಜ್ಜವಾಗಿ ಹೇಳಿಕೊಂಡ ಹಿಂದಿನ ನಮ್ಮ ಸರ್ಕಾರದ ಸಾಧನೆಗಳಿವೆ. ಇದನ್ನು ಹೊರತುಪಡಿಸಿ ಸತ್ಯನೂ ಇಲ್ಲ, ಸತ್ವವೂ ಇಲ್ಲ. ಕಳೆದ ವರ್ಷ ನೀತಿ ಆಯೋಗವು ನಾವಿನ್ಯತಾ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ನೀಡಿತ್ತು. ಇದನ್ನು ಬಿಜೆಪಿ ಸರ್ಕಾರ ತನ್ನ ಸಾಧನೆ ಎಂದು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಸ್ಥಾಪನೆ ಮಾಡಿ, ವಾರ್ಷಿಕ 5 ಲಕ್ಷ ಮಂದಿಗೆ ಕೌಶಲ್ಯ ತರಬೇತಿ ನೀಡಿದ್ದ ನಮ್ಮ ಸರ್ಕಾರ. ಇದರಲ್ಲಿ ಬಿಜೆಪಿ ಅವರ ಸಾಧನೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸರ್ಕಾರ “ಟೇಕ್ ಆಫ್ ಆಗಿಲ್ಲ, ಟೇಕ್ ಆಫ್ ಆಗಿಲ್ಲ” ಎಂದು ಇದೇ ಸದನದಲ್ಲಿ ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದರು. ಈಗಿನ ಸರ್ಕಾರ ‘ಟೇಕ್ ಆಫ್’ ಅಲ್ಲ ಸಂಪೂರ್ಣ ‘ಆಫ್ ಆಗಿ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಹಳೆ ಡಕೋಟ ಬಸ್ ನಂತಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಮೊದಲೇ ಬರೋದಿಲ್ಲ, ಜೊತೆಗೆ ನಾಲ್ಕು ದಿಕ್ಕುಗಳಿಂದಲೂ ಕಾಲೆಳೆಯುತ್ತಿರುವ ಸ್ವಪಕ್ಷದವರ ಕಾಟ. ಬಸ್ ಮುಂದಕ್ಕೆ ಹೇಗೆ ಹೋಗೋದು? ಇಂತಹ ಸರ್ಕಾರವನ್ನು “ರಿಪೇರಿ” ಮಾಡಲಾಗುವುದಿಲ್ಲ, “ರಿಪ್ಲೇಸ್’ ಮಾಡಬೇಕಾಗುತ್ತದೆ ಅಷ್ಟೇ. ಆ ಕಾಲ ಸದ್ಯದಲ್ಲಿಯೇ ಬರಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ನೀವು ಅಧಿಕಾರಕ್ಕೆ ಬಂದು 18 ತಿಂಗಳುಗಳಾಯಿತು. ಈ ಅವಧಿಯಲ್ಲಿ ನಿಮ್ಮ ಸರ್ಕಾರದ ಸಾಧನೆಯನ್ನು ನಿಮ್ಮ ಪಕ್ಷದ ಪ್ರಣಾಳಿಕೆಯ ಜೊತೆ ಓದಿಕೊಳ್ಳಿ. ನಿಮಗೆ ಆತ್ಮಸಾಕ್ಷಿ ಎಂಬುದು ಎಲ್ಲಾದರೂ ಉಳಿದುಕೊಂಡಿದ್ದರೆ ನೀವು ಖಂಡಿತ ಒಂದು ಕ್ಷಣ ಕೂಡಾ ಆ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ. ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅತಿವೃಷ್ಟಿ ಮತ್ತು ಕೊರೊನಾ ಹಾವಳಿಯ ಪ್ರಕೃತಿ ವಿಕೋಪ, ಇನ್ನೊಂದೆಡೆ ಬಿಜೆಪಿ ಸರ್ಕಾರದ ಕೃಷಿ ವಿರೋಧಿ ಕಾನೂನುಗಳ ಮಾನವ ನಿರ್ಮಿತ ವಿಕೋಪ. ಕಷ್ಟ-ನಷ್ಟಗಳಲ್ಲಿ ಬೆಂದು ಹೋಗಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಇಡೀ ದೇಶವೇ ಜ್ವಾಲಾಮುಖಿಯಂತಾಗಿದೆ, ಅದು ಯಾವಾಗ ಸಿಡಿಯುತ್ತೋ ಗೊತ್ತಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಗೊಬ್ಬರ ಕೇಳಿದ ಇಬ್ಬರು ರೈತರಿಗೆ ಪೊಲೀಸರ ಮೂಲಕ ಗುಂಡಿಟ್ಟು ಅವರ ಜೀವ ತೆಗೆದಿರಿ. ಈ ಬಾರಿ ಐದು ರೈತವಿರೋಧಿ ಕಾನೂನುಗಳನ್ನು ಜಾರಿಗೆ ತಂದು ರೈತರೆಲ್ಲರ ಜೀವದ ಜೊತೆ ಜೀವನವನ್ನು ನಾಶಮಾಡಲು ಹೊರಟಿದ್ದೀರಿ. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿರುವ ಒಂದು ಲಕ್ಷ ರೂಪಾಯಿ ವರೆಗಿನ ರಾಜ್ಯದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎನ್ನುವುದು ನಿಮ್ಮ ಪ್ರಣಾಳಿಕೆಯ ಮೊದಲ ಭರವಸೆ. ಆ ಭರವಸೆಯನ್ನು ಈಡೇರಿಸದ ನಿಮಗೆ ಹಸಿರು ಶಾಲು ಹೊದ್ದುಕೊಂಡು ರೈತಪರ ಎಂದು ಹೇಳಿಕೊಳ್ಳುವ ಯಾವ ನೈತಿಕತೆ ಇದೆ ಹೇಳಿ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದ್ದಾರೆ.

Exit mobile version