ಮುಂಬೈ ನೋಡಿ ಕಲಿಯಿರಿ ಎಂದು ದೆಹಲಿಗೆ ಹೇಳಿದ ಸುಪ್ರೀಮ್ ಕೊರ್ಟ್

ನವದೆಹಲಿ, ಮೇ. 05: ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ವಿಚಾರದಲ್ಲಿ ಮುಂಬೈ ಮಾದರಿ ಅನುಸರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ದೆಹಲಿಗೆ ಆಕ್ಸಿಜನ್ ಪೂರೈಸುವಂತೆ ನ್ಯಾಯಾಲಯ ನೀಡಿದ ಆದೇಶವನ್ನು ಪಾಲನೆ ಮಾಡದಿದ್ದಕ್ಕೆ ದೆಹಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದರ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಆಕ್ಸಿಜನ್ ಬೇಡಿಕೆ ಪೂರೈಸಲು ಕೇಂದ್ರದಿಂದ ಏನು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಕೇಳಿತು. ಈ ವೇಳೆ, ಮುಂಬೈನ ಮಹಾನಗರ ಪಾಲಿಕೆ ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿರುವ ಸಂಗತಿಯನ್ನು ಉಲ್ಲೇಖಿಸಿ ಮುಂಬೈ ಮಾದರಿಯನ್ನು ಗಮನಿಸುವಂತೆ ಕೇಂದ್ರಕ್ಕೆ ಹಾಗೂ ಅಧಿಕಾರಿಗಳಿಗೆ ತಿಳಿಹೇಳಿತು.

ನ್ಯಾ| ಡಿ ವೈ ಚಂದ್ರಚೂಡ್ ಮತ್ತು ನ್ಯಾ| ಎಂ ಆರ್ ಶಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಇಂದು ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ಲಾನ್​ಗಳನ್ನ ವಿಚಾರಿಸಿತು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ದೆಹಲಿ (GNCTD) ಪರವಾಗಿ ಹಿರಿಯ ನ್ಯಾಯವಾದಿ ರಾಹುಲ್ ಮೆಹ್ರಾ ಅವರು ಇಂದು ವಾದ ಮಂಡಿಸಿದರು. “ಕೇಂದ್ರ ಮತ್ತು ದೆಹಲಿ ಎರಡೂ ಸರ್ಕಾರಗಳು ಅತೀವ ಪ್ರಯತ್ನ ಹಾಕುತ್ತಿವೆ. ಇಲ್ಲಿ ವೈರುದ್ಧ್ಯಗಳಿಲ್ಲ. ಅಧಿಕಾರಿಗಳನ್ನ ಜೈಲಿಗೆ ಹಾಕಿದಾಕ್ಷಣ ಆಕ್ಸಿಜನ್ ಪೂರೈಕೆ ಸರಿಯಾಗುವುದಿಲ್ಲ. ವಿವಿಧ ರಾಜ್ಯಗಳಿಗೆ ಆಮ್ಲಜನಕ ಪೂರೈಸಲು ಹೊಸ ವ್ಯವಸ್ಥೆ ರೂಪಿಸುತ್ತಿದೆ” ಎಂದು ತುಷಾರ್ ಮೆಹ್ತಾ ಅವರು ಕೋರ್ಟ್​ಗೆ ತಿಳಿಸಿದರು. ಆಮ್ಲಜನಕದ ಬೇಡಿಕೆ ತಿಳಿಯಲು ಕೇಂದ್ರ ಸರ್ಕಾರದ ಬಳಿ ಒಂದು ಸೂತ್ರ ಇದೆ ಎಂದು ಸಾಲಿಸಿಟರ್ ಜನರಲ್ ವಿವರಣೆ ನೀಡಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ನ್ಯಾಯಪೀಠ, ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಬೇಡಿಕೆಗಳಿರುತ್ತವೆ. ಒಂದು ಸ್ಥಾಯಿ ಸೂತ್ರ (Static Formula) ಇಟ್ಟುಕೊಂಡು ಕೂರುವುದು ಸರಿಯಲ್ಲ. “ದೆಹಲಿಯಲ್ಲಿನ ಆಕ್ಸಿಜನ್ ಬೇಡಿಕೆ ಪೂರೈಸಲು ಮುಂದಿನ ಕೆಲ ದಿನಗಳಲ್ಲಿ ನೀವು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ದಯವಿಟ್ಟು ತಿಳಿಸಿ” ಎಂದು ಹೇಳಿದ ನ್ಯಾಯಪೀಠ, ಕೋವಿಡ್-19 ನಿರ್ವಹಣೆಯಲ್ಲಿ ಮುಂಬೈನ ಬಿಎಂಸಿ ಅನುಸರಿದ ಕ್ರಮಗಳ ಮಾದರಿಯನ್ನು ಗಮನಿಸುವಂತೆ ತಿಳಿಸಿತು.

Exit mobile version