ಗಣಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಗಣಿ ಅಧಿಕಾರಿ ಫೈಯಾಜ್ ಅಹಮದ್ ಅಮಾನತು

ಬಾಗಲಕೋಟೆ,ಫೆ.18 : ಗಣಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಮತ್ತು ಅವರಿಗೆ ಕಿರುಕುಳ ನೀಡುತ್ತಿದ್ದ ಬಾಗಲಕೋಟೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ  ಫೈಯಾಜ್ ಅಹಮದ್ ಅವರನ್ನು ಇಂದು ಅಮಾನತು ಮಾಡಲಾಗಿದೆ. ಫೈಯಾಜ್ ಅಹಮದ್ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಈ ನಿರ್ಧಾರ ಕೈಗೊಂಡಿದ್ದಾರೆ. 

ಬಾಗಲಕೋಟೆಯ ನೂತನ ಸರ್ಕ್ಯೂಟ್ ಹೌಸ್‍ನಲ್ಲಿ ಫೆ.16 ರಂದು ಕ್ರಷರ್ ಮಾಲೀಕರ ಜೊತೆ ಸಚಿವರು ಸಭೆ ನಡೆಸಿದ್ರು. ಈ ಸಂದರ್ಭದಲ್ಲಿ ಗಣಿ ಮಾಲೀಕರು   ಉಪನಿರ್ದೇಶಕ ಫೈಯಾಜ್ ಅಹಮದ್ ಶೇಖ್ ಅವರ ವಿರುದ್ಧ ದೂರು ನೀಡಿದ್ರು. ಅಲ್ಲದೆ  ಗಣಿ ಮಾಲೀಕರು ಉಪನಿರ್ದೇಶಕ ಫೈಯಾಜ್ ಅಹಮದ್ ಶೇಖ್ ಅವರು ಅನಗತ್ಯವಾಗಿ ಕಿರುಕುಳ ಕೊಡುವುದು, ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆಂದು ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಈ ದೂರುಗಳನ್ನು ಪರಿಶೀಲಿಸಿದ ಸಚಿವರು ಮೇಲ್ನೋಟಕ್ಕೆ ಆರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಫೈಯಾಜ್  ಅವರನ್ನು ಅಮಾತುಪಡಿಸಿದ್ದಾರೆ.

ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1956ರ ನಿಯಮ 10(1) (ಡಿ) ಅನ್ವಯ ಗಣಿ ಮತ್ತು ಭೂ ಇಲಾಖೆಯ ನಿರ್ದೇಶಕರಾದ ಬಿ.ಎಸ್.ರಮೇಶ್ ಅವರು ಫೆಬ್ರವರಿ 16 ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಅಮಾನತ್ತಿನಲ್ಲಿರುವ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ 98ರ ನಿಯಮದಂತೆ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ, ಈ ವೇಳೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಉಪನಿರ್ದೇಶಕ ಫೈಯಾಜ್ ಅಹಮದ್ ಶೇಖ್ ಅವರಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Exit mobile version