ಮೆಣಸಿನ ಪುಡಿ ಶುದ್ಧವೋ ಅಥವಾ ನಕಲಿಯೋ ಎಂದು ಕಂಡುಹಿಡಿಯಲು ಇಲ್ಲಿವೆ ಟ್ರಿಕ್ ಗಳು

ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ ಆಗುವುದು ಸಾಮಾನ್ಯ. ಅನಾದಿಕಾಲದಿಂದಲೂ ಇದು ನಡೆದುಕೊಂಡೇ ಬಂದಿದೆ. ಈ ಕಲಬೆರಕೆ ಆಹಾರದ ರುಚಿಯನ್ನು ಹಾಳುಮಾಡುವುದಲ್ಲದೆ ನಿಮ್ಮ ಆರೋಗ್ಯವನ್ನು ಹಾಳುಮಾಡುವ ಕೆಲಸವನ್ನು ಸಹ ಮಾಡುತ್ತದೆ. ನೀವು ಮಾರುಕಟ್ಟೆಯಿಂದ ಪುಡಿ ಮಾಡಿದ ಮಸಾಲೆಗಳನ್ನು, ವಿಶೇಷವಾಗಿ ಕೆಂಪು ಮೆಣಸಿನ ಪುಡಿಯನ್ನು ಖರೀದಿಸಿದರೆ, ನಿಮ್ಮ ಅಡುಗೆಮನೆಯಲ್ಲಿ ಇರುವ ಕೆಂಪು ಮೆಣಸಿನ ಪುಡಿ ಶುದ್ಧವೋ ಅಥವಾ ನಕಲಿಯೋ ಎಂದು ಕಂಡುಹಿಡಿಯಲು ಈ ಸುಲಭ ಕ್ರಮಗಳನ್ನು ಪ್ರಯತ್ನಿಸಿ.

ಇಟ್ಟಿಗೆ ಪುಡಿ/ಮರಳು ಬೆರೆಸಿದ್ದನ್ನು ಈ ರೀತಿ ಕಂಡುಹಿಡಿಯಿರಿ:
ಕೆಂಪು ಮೆಣಸಿನ ಪುಡಿಗೆ ಇಟ್ಟಿಗೆ ಹುಡಿ ಅಥವಾ ಮರಳು ಸೇರಿಸಿದ್ದನ್ನು ಕಂಡುಹಿಡಿಯಲು ನೀವು ಮಾದರಿ ಖಾರದ ಪುಡಿಯನ್ನು ಒಂದು ಗ್ಲಾಸ್ ನೀರಿಗೆ ಹಾಕಿ. ಅದರೊಳಗೆ ಕೈ ಹಾಕಿ ತಳ ಚೆನ್ನಾಗಿ ಉಜ್ಜಿ. ಹೀಗೆ ಉಜ್ಜುವಾಗ ಕೈಗೆ ಮರಳು ಅಥವಾ ಕಣಗಳ ಫೀಲ್ ಆದರೆ ಅದರಲ್ಲಿ ಇಟ್ಟಿಗೆ ಪುಡಿ/ಮರಳು ಬೆರಕೆ ಆಗಿದೆ ಎಂದರ್ಥ.

ಪಿಷ್ಟ ಬೆರಕೆ ಮಾಡಿದ್ದನ್ನು ಕಂಡುಹಿಡಿಯಲು ಹೀಗೆ ಮಾಡಿ:
ಕೆಂಪು ಮೆಣಸಿನಕಾಯಿಯಲ್ಲಿ ಪಿಷ್ಟವನ್ನು ಕಲಬೆರಕೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುವುದು. ಇದನ್ನು ಕಂಡುಹಿಡಿಯಲು, ಮೆಣಸಿನ ಪುಡಿ ಮೇಲೆ ಕೆಲವು ಹನಿ ಟಿಂಚರ್ ಅಯೋಡಿನ್ ಅಥವಾ ಅಯೋಡಿನ್ ದ್ರಾವಣವನ್ನು ಹಾಕಿ. ಈ ಅಯೋಡಿನ್ ಹನಿಗಳನ್ನು ಸೇರಿಸಿದ ನಂತರ ಮೆಣಸಿನ ಹುಡಿ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ಆ ಪುಡಿಗೆ ಪಿಷ್ಟವನ್ನು ಕಲಬೆರಕೆ ಮಾಡಲಾಗಿದೆ ಎಂದರ್ಥ.

ಸೋಪ್ ಪುಡಿ ಕಂಡುಹಿಡಿಯಲು ಹೀಗೆ ಮಾಡಿ:
ಅನೇಕ ಬಾರಿ ಸೋಪ್ ಪುಡಿಯನ್ನು ಕೆಂಪು ಮೆಣಸಿನ ಪುಡಿಯಲ್ಲಿ ಬೆರೆಸಲಾಗುತ್ತದೆ. ಇದನ್ನು ಕಂಡುಹಿಡಿಯಲು, ಒಂದು ಟೀಸ್ಪೂನ್ ಕೆಂಪು ಮೆಣಸಿನಕಾಯಿಯನ್ನು ಅರ್ಧ ಕಪ್ ನೀರಿಗೆ ಹಾಕಿ ಬೆರೆಸಿ ಸ್ವಲ್ಪ ಸಮಯದ ಬಳಿಕ ಮೆಣಸಿನ ಹುಡಿ ತಳ ಸೇರಿದಾಗ, ಆ ನೀರನ್ನು ತೆಗೆದು ನಿಮ್ಮ ಅಂಗೈ ಮೇಲೆ ಉಜ್ಜಿಕೊಳ್ಳಿ. ಅಂಗೈಗಳಲ್ಲಿ ಜಿಡ್ಡು ಜಿಡ್ಡಾದರೆ ಅದರಲ್ಲಿ ಸೋಪ್ ಕಲಬೆರಕೆ ಇದೆ ಎಂದು ಅರ್ಥಮಾಡಿಕೊಳ್ಳಿ.

ಕೃತಕ ಬಣ್ಣ ಹಾಕಿರುವುದನ್ನು ಕಂಡುಹಿಡಿಯಲು ಹೀಗೆ ಮಾಡಿ:
ಕೆಂಪು ಮೆಣಸಿನ ಪುಡಿಯ ಬಣ್ಣವನ್ನು ಹೊಳೆಯುವಂತೆ ಮಾಡಲು, ಅದರಲ್ಲಿ ಕೃತಕ ಬಣ್ಣವನ್ನು ಸೇರಿಸುತ್ತಾರೆ. ಕೆಂಪು ಮೆಣಸಿನಕಾಯಿ ಹೆಚ್ಚು ಗಾಢ ಕೆಂಪು ಬಣ್ಣದಲ್ಲಿದ್ದರೆ, ಅದರಲ್ಲಿ ಕಂಡುಬರುವ ನಕಲಿ ಬಣ್ಣವನ್ನು ಗುರುತಿಸಲು, ಅರ್ಧ ಟೀಸ್ಪೂನ್ ಕೆಂಪು ಮೆಣಸಿನ ಪುಡಿಯನ್ನು ಅರ್ಧ ಗ್ಲಾಸ್ ನೀರಿನಲ್ಲಿ ಬೆರೆಸಿ. ಕೆಂಪು ಮೆಣಸಿನ ಪುಡಿ ನೀರಿನಲ್ಲಿ ಕರಗಿದರೆ ಅದು ನಕಲಿ. ಶುದ್ಧ ಕೆಂಪು ಮೆಣಸಿನಕಾಯಿ ಪುಡಿ ನೀರಿನಲ್ಲಿ ಕರಗುವುದಿಲ್ಲ.

Exit mobile version