ಭ್ರಷ್ಟ ಅಧಿಕಾರಿಗಳಿಂದ ಹಳ್ಳ ಹಿಡಿಯಿತು ‘ಶುಚಿ’ ಯೋಜನೆ! ನೂರಾರು ಬಾಕ್ಸ್‌ ಸ್ಯಾನಿಟರಿ ಪ್ಯಾಡ್‌ ಕಸದ ಬುಟ್ಟಿ ಪಾಲು

ಭ್ರಷ್ಟ ಅಧಿಕಾರಿಗಳಿಂದ ಹಳ್ಳ ಹಿಡಿಯಿತು ‘ಶುಚಿ’ ಯೋಜನೆ!100 box sanitary pads thrown away in dirty place |

ಸರ್ಕಾರದ ಒಳ್ಳೋಳ್ಳೆ ಯೋಜನೆಗಳು ಹೇಗೆ ಹಳ್ಳ ಹಿಡೀತವೆ ಅನ್ನೋದಕ್ಕೆ ಈ ದೃಶ್ಯಾವಳಿಗಳೇ ಸಾಕ್ಷಿ. ಸರ್ಕಾರ ಹೆಣ್ಮಕ್ಕಳ ಅನುಕೂಲಕ್ಕೆ, ಅವರ ಆರೋಗ್ಯದ ದೃಷ್ಟಿಯಿಂದ ಜಾರಿ ಮಾಡಿರುವ ಶುಚಿ ಅನ್ನೋ ಯೋಜನೆಗೆ ಎಂಥಾ ದುರ್ಗತಿ ಬಂದಿದೆ ಅನ್ನೋದನ್ನ ನೀವೇ ಕಣ್ಣಾರೆ ನೋಡಿ.

ಇದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಂಡು ಬಂದ ದೃಶ್ಯಾವಳಿ.  

ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ ‘ಶುಚಿ’ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ ನೀಡುತ್ತಿದೆ. ಆದ್ರೆ ಶಾಲಾ ಮಕ್ಕಳಿಗೆ ನೀಡಲು ಕಳುಹಿಸಿದ ಪ್ಯಾಡ್‌ಗಳನ್ನು ಶಾಲಾ ಮಕ್ಕಳಿಗೂ ಕೊಡದೇ ಯಾವುದೇ ಸ್ವಚ್ಛತೆ ಇಲ್ಲದ ಜಾಗದಲ್ಲಿ ಹೇಗೆ ಶೇಖರಣೆ ಮಾಡಿಟ್ಟಿದ್ದಾರೆ ನೋಡಿ.

ಮೂಡಲಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಾಕ್ಸ್‌ ಸ್ಯಾನಿಟರಿ ಪ್ಯಾಡ್‌ಗಳನ್ನು ಕಸದ ತೊಟ್ಟಿಗೆ ಬಿಸಾಡಿದಂತೆ ಶೇಖರಣೆ ಮಾಡಿದ್ದಾರೆ ಇಲ್ಲಿನ ಅಧಿಕಾರಿಗಳು. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾರ್ವಜನಿಕರ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತಿದೆ ಎನ್ನುವುದಕ್ಕೆ ಇನ್ನಿತರ ದೃಷ್ಟಾಂತ ಬೇಕಾಗಿಲ್ಲ. ಬಿಸಿಲಲ್ಲಿ ಒಣಗಿ, ಮಳೆ ಬಂದಾಗ ಸಂಪೂರ್ಣ ನೆನೆದು ಹೋದರು ತಾಲೂಕಿನ ಸಮುದಾಯ ಆರೋಗ್ಯ ಸಿಬ್ಬಂದಿಗಳಿಗಾಗಲಿ, ಅಧಿಕಾರಿಗಳಿಗಾಗಲೀ ಈ ಬಗ್ಗೆ ಗೊಡವೆಯೇ ಇಲ್ಲದಂತಾಗಿದೆ.

ಈ ಪ್ಯಾಡ್‌ಗಳ ಬಳಕೆಯ ವಿಧಾನ, ಪ್ಯಾಡ್‌ಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಅದನ್ನು ಬಳಸುವಂತೆ ಮಾಡುವ ಜವಾಬ್ದಾರಿ ಆರೋಗ್ಯ ಅಧಿಕಾರಿಗಳದ್ದು. ಆದ್ರೆ ಅದ್ಯಾವುದನ್ನೂ ಮಾಡದೆ, ಪ್ಯಾಡ್‌ಗಳ ಅವಶ್ಯಕತೆ ಇರುವ ಮಕ್ಕಳಿಗೂ ನೀಡದೆ ಅದನ್ನು ಈ ರೀತಿ ಬೇಕಾಬಿಟ್ಟಿ ಬೀಡಾಡಿರೋದು ನೋಡಿದ್ರೆ ಇಲ್ಲಿನ ಅಧಿಕಾರಿಗಳಿಗೇ ಈ ಯೋಜನೆಯ ಬಗ್ಗೆ ಅಸಡ್ಡೆ ಇರೋದು ಸ್ಪಷ್ಟವಾಗಿ ಗೋಚರವಾಗುತ್ತೆ.

ಅಲ್ಲದೇ ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ರೂ ಕೂಡ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಅಲ್ಲದೇ ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂಬುದು ಸಾರ್ವಜನಿಕರ ದೂರಾಗಿದೆ.

ಈ ವರದಿಯ ಮೂಲಕವಾದರೂ ಮೂಡಲಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ವಿಜಯಾಟೈಮ್ಸ್‌ನ ಆಶಯವಾಗಿದೆ.

Exit mobile version