ನಿಮ್ಮ ಮಗುವಿನ ಮೂಳೆ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಅಂಶಗಳಿವು

ಮಕ್ಕಳಿಗೆ ಹೆಚ್ಚಾಗಿ ಮನೆ ಆಹಾರಕ್ಕಿಂತ ಹೊರಗೆ ದೊರೆಯುವ ಜಂಕ್ ಫುಡ್ ಗಳೇ ಜಾಸ್ತಿ ಇಷ್ಟವಾಗೋದು. ಫ್ರೆಂಚ್ ಫ್ರೈಸ್, ಚಿಪ್ಸ, ಹಾಟ್ ಡಾಗ್ಸ ನಂತಹ ತಿಂಡಿಗಳನ್ನು ಮಕ್ಕಳು ಎಂದಿಗೂ ಬೇಡವೆನ್ನುವುದಿಲ್ಲ. ಆದರೆ ಅಂತಹ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಬೊಜ್ಜಿನ ಅಪಾಯ ಹೆಚ್ಚಾಗುತ್ತದೆ, ಜೊತೆಗೆ ಅವರ ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇವುಗಳಿಂದ ಮಕ್ಕಳ ಮೂಳೆ ಬೆಳವಣಿಕೆಯಾಗದೇ ಇರಬಹುದು ಅಥವಾ ಇನ್ನಿತರ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಈ ಸಂಸ್ಕರಿಸಿದ ಆಹಾರಗಳ ಜೊತೆಗೆ ನಿಮ್ಮ ಮಗುವಿನ ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಇತರ ವಿಷಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಗುವಿನ ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಇತರ ವಿಷಯಗಳು:

ಪೋಷಕಾಂಶಗಳ ಕೊರತೆ:
ಮಕ್ಕಳಲ್ಲಿ ಸಾಮಾನ್ಯ ಮೂಳೆ ಬೆಳವಣಿಗೆಗೆ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್ ಅತ್ಯಗತ್ಯ. ಈ ಪೋಷಕಾಂಶಗಳ ಕೊರತೆಯು ಕಡಿಮೆ ಮೂಳೆ ಸಾಂದ್ರತೆಗೆ ಕಾರಣವಾಗಬಹುದು, ಇದು ನಂತರದ ಜೀವನದಲ್ಲಿ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಕ್ಯಾಲ್ಸಿಯಂ ಸಮೃದ್ಧವಾದ ಆಹಾರವನ್ನು ನಿಮ್ಮ ಮಕ್ಕಳಿಗೆ ಈಗಿನಿಂದಲೇ ನೀಡುವುದು ಉತ್ತಮ.

ವ್ಯಾಯಾಮದ ಕೊರತೆ:
ಜಡಜೀವನವು ಮೂಳೆಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳು ಸೂಚಿಸಿವೆ. ಇದು ನಂತರದ ಜೀವನದಲ್ಲಿ ಮೂಳೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಮತ್ತೊಂದೆಡೆ, ವ್ಯಾಯಾಮವು ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಇತರ ಅನೇಕ ಸಕಾರಾತ್ಮಕ ಆರೋಗ್ಯ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಮಕ್ಕಳು ವ್ಯಾಯಾಮ ಮಾಡುವುದು ತುಂಬಾ ಮುಖ್ಯ.

ಕೆಲವು ಔಷಧಿಗಳು:
ಥೈರಾಯ್ಡ್ ಹಾರ್ಮೋನ್ ಥೆರಪಿ, ಗ್ಲುಕೊಕಾರ್ಟಿಕಾಯ್ಡ್ಗಳು ಮತ್ತು ಕೆಲವು ಕ್ಯಾನ್ಸರ್ಗೆ ನೀಡುವ ಔಷಧಿಗಳು ಮಕ್ಕಳಲ್ಲಿ ಮೂಳೆ ದ್ರವ್ಯರಾಶಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಇವುಗಳನ್ನು ತೆಗೆದುಕೊಳ್ಳುತ್ತಿರುವ ಮಕ್ಕಳನ್ನು ಪೋಷಕಾಂಶಯುಕ್ತ ಆಹಾರ ನೀಡಿ, ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ.

ವೈದ್ಯಕೀಯ ಸ್ಥಿತಿಗಳು:
ವೈದ್ಯಕೀಯ ಪರಿಸ್ಥಿತಿಗಳಾದ ಹೈಪರ್ ಥೈರಾಯ್ಡಿಸಮ್, ಕೆಲವು ರೀತಿಯ ಕ್ಯಾನ್ಸರ್, ಪಿತ್ತಜನಕಾಂಗದ ಕಾಯಿಲೆಯಂತಹ ವೈದ್ಯಕೀಯ ಪರಿಸ್ಥಿತಿಗಳು ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಯ ಮೇಲೆ ನಕಾರಾಣಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ ಈ ವಿಚಾರಗಳು ನಿಮ್ಮ ಮಗುವನ್ನು ಕಾಡುತ್ತಿದ್ದರೆ, ಮಗುವಿನ ಮೂಳೆಯ ಕುರಿತು ಜಾಗರೂಕರಾಗಿರಿ.

Exit mobile version