ಗರ್ಭಿಣಿಯರು ಸೇವಿಸುವ ಆಹಾರದ ಬಗೆಗಿನ ತಪ್ಪು ಕಲ್ಪನೆಗಳಿವು..

ಗರ್ಭಿಣಿಯಾಗುವುದು ಒಂದು ಸುಮಧುರ ಅನುಭವ. ಇದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮಹಿಳೆಯೊಬ್ಬಳು ಅಗಾಧ ಬದಲಾವಣೆಗಳಿಗೆ ಒಳಗಾಗುವ ಸಮಯ. ಈ ಬದಲಾವಣೆಗೆ ತಕ್ಕಂತೆ ಆಕೆ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇಂತಹ ಸಮಯದಲ್ಲಿ ಆಹಾರ ಸೇವನೆಯ ವಿಚಾರದಲ್ಲಿ ನಿಜವೆಂದು ನಂಬಿಕೊಂಡು ಬಂದ ಕೆಲವು ತಪ್ಪು ಕಲ್ಪನೆಗಳಿವೆ.

ಗರ್ಭಿಣಿಯರ ಆಹಾರದ ಬಗೆಗಿನ ತಪ್ಪು ಕಲ್ಪನೆಗಳು:

ಮಿಥ್ಯ 1: ಪಪ್ಪಾಯಿ ತಿನ್ನುವುದು ಗರ್ಭಪಾತಕ್ಕೆ ಕಾರಣವಾಗಬಹುದು:
ಹೌದು, ಇದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇದು ತಪ್ಪು ಮಾಹಿತಿ, ಚೆನ್ನಾಗಿ ಮಾಗಿದ ಪಪ್ಪಾಯಿ ಸುರಕ್ಷಿತವಾಗಿದೆ. ಇದು ವಿಟಮಿನ್ ಎ, ಬಿ ಮತ್ತು ಪೊಟ್ಯಾಸಿಯಮ್ನ ಅತ್ಯುತ್ತಮ ಮೂಲವಾಗಿದ್ದು, ಭ್ರೂಣದ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಆದರೆ ಬಲಿಯದ ಅಥವಾ ಅರೆ-ಹಣ್ಣಾದ ಪಪ್ಪಾಯಿಯಲ್ಲಿ ಪಪೈನ್ ಇರುವುದರಿಂದ ಇದನ್ನು ತಪ್ಪಿಸಬೇಕು, ಇದು ಆಕ್ಸಿಟೋಸಿನ್ ಮತ್ತು ಪ್ರೊಸ್ಟಗ್ಲಾಂಡಿನ್ ನಂತಹ ಹಾರ್ಮೋನುಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಈ ಹಾರ್ಮೋನುಗಳು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಿ, ಅವಧಿಯ ಮೊದಲೇ ಹೆರಿಗೆ ನೋವಿಗೆ ಕಾರಣವಾಗಬಹುದು.

ಮಿಥ್ಯ 2: ಗರ್ಭಿಣಿಯರು ಎರಡು ಪಟ್ಟು ತಿನ್ನಬೇಕು:
ಗರ್ಭಿಣಿಯಾಗಿದ್ದಾಗ ಎರಡು ಪಟ್ಟು ತಿನ್ನಬೇಕು ಎಂಬ ಈ ಜನಪ್ರಿಯ ಮಾತು ಎಂದಿಗೂ ನಿಜವಲ್ಲ. ಇದನ್ನು ಅನುಸರಿಸುವುದು ಅನಾರೋಗ್ಯಕರ ಮತ್ತು ಅನಗತ್ಯ ತೂಕ ಹೆಚ್ಚಾಗಲು ಕಾರಣವಾಗಬಹುದು. ನಿಮ್ಮ ಎತ್ತರ ಮತ್ತು ತೂಕಕ್ಕೆ ಅನುಗುಣವಾಗಿ ಶಿಫಾರಸು ಮಾಡಿದ ಕ್ಯಾಲೊರಿ ಸೇವನೆಯನ್ನು ಅನುಸರಿಸುತ್ತಿದ್ದರೆ, ಗರ್ಭಿಣಿಯಾದಾಗ, ಹೆಚ್ಚುವರಿ 300-350 ಕ್ಯಾಲೊರಿಗಳು ಬೇಕಾಗುತ್ತವೆ. ಅಲ್ಲದೆ, ಸೇವಿಸುವ ಕ್ಯಾಲೊರಿಗಳಿಗಿಂತ ನೀವು ತಿನ್ನುವ ಆಹಾರದ ಗುಣಮಟ್ಟವನ್ನು ಕೇಂದ್ರೀಕರಿಸುವುದು ಮುಖ್ಯವಾಗಿದೆ.

ಮಿಥ್ಯ 3: ಗರ್ಭಿಣಿಯಾಗಿದ್ದಾಗ ಕೇಸರಿ ಸೇವಿಸುವುದು ಮಗುವಿನ ತ್ವಚೆ ಬೆಳಗಿಸುವುದು:
ಕೇಸರಿಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವುದರಿಂದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ಮನಸ್ಥಿತಿಯ ಬದಲಾವಣೆಗಳನ್ನು ಮತ್ತು ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆಯೇ ಹೊರತು, ಇದು ಯಾವುದೇ ರೀತಿಯಲ್ಲಿ ಚರ್ಮದ ಬಣ್ಣಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಮಿಥ್ಯ 4: ಒಂಬತ್ತನೇ ತಿಂಗಳಲ್ಲಿ ತುಪ್ಪ ಹೆಚ್ಚು ಸೇವಿಸುವುದು ಹೆರಿಗೆಯನ್ನು ಸರಾಗಗೊಳಿಸುವುದು:
ಗರ್ಭಧಾರಣೆಯ ಒಂಬತ್ತನೇ ತಿಂಗಳಲ್ಲಿ ತುಪ್ಪವನ್ನು ಹೆಚ್ಚು ತಿನ್ನುವುದರಿಂದ ಕಿಬ್ಬೊಟ್ಟೆಯ ಮತ್ತು ಶ್ರೋಣಿಯ ಸ್ನಾಯುಗಳು ನಯಗೊಳ್ಳುತ್ತದೆ ಮತ್ತು ಸಡಿಲಗೊಳಿಸುತ್ತದೆ ಎಂದು ನಂಬಿಕೆಯಿದೆ. ಇದು ಹೆರಿಗೆಯ ಸಮಯದಲ್ಲಿ ಮಗುವನ್ನು ಸುಲಭವಾಗಿ ‘ಸ್ಲಿಪ್’ ಮಾಡಲು ಸಹಾಯ ಮಾಡುತ್ತದೆ. ಆದರೆ, ಇದನ್ನು ಪುಷ್ಠೀಕರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಮಿಥ್ಯ 5:ಗರ್ಭಿಣಿಯಾಗಿದ್ದಾಗ ಮಸಾಲೆಯುಕ್ತ ಆಹಾರ ಸೇವಿಸಬಾರದು:
ಇದು ನಿಜ, ಆದರೆ ವಿಭಿನ್ನ ಕಾರಣಗಳಿಗಾಗಿ. ಕೆಲವು ಕುರುಡು ನಂಬಿಕೆಯಂತೆ, ನೀವು ಗರ್ಭಿಣಿಯಾಗಿದ್ದಾಗ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಮಗು ಕುರುಡಾಗುವುದಿಲ್ಲ. ಆದರೆ ಇದು ನಿಮಗೆ ಸ್ವಲ್ಪ ಅಜೀರ್ಣ ಮತ್ತು ಎದೆಯುರಿ ಉಂಟುಮಾಡಬಹುದು. ಆದ್ದರಿಂದ ಇಂತಹ ಆಹಾರವನ್ನು ಸೇವಿಸಬಾರದು.

ಮಿಥ್ಯ 6: ಮೀನಿನಲ್ಲಿ ಪಾದರಸ ಇರುವುದರಿಂದ ಮೀನುಗಳನ್ನು ತಪ್ಪಿಸಬೇಕು:
ಎಲ್ಲಾ ಮೀನುಗಳು ಅಸುರಕ್ಷಿತವಲ್ಲ. ಸಾಲ್ಮನ್, ಸಾರ್ಡೀನ್ಗಳು, ಮುಂತಾದವುಗಳಂತೆ ಪಾದರಸ ಕಡಿಮೆ ಇರುವ ಹಲವು ಆಯ್ಕೆಗಳಿವೆ. ವಾರಕ್ಕೆ 2-3 ಬಾರಿ ಮೀನುಗಳನ್ನು ತಿನ್ನಿ. ಸಮುದ್ರಾಹಾರ ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ, ಇದು ನಿಮ್ಮ ಮಗುವಿನ ಬೆಳವಣಿಗೆಗೆ ಮುಖ್ಯವಾಗಿದೆ.

Exit mobile version