ಹಿರೇಕುಂಬಿಯಲ್ಲಿ ಆಸ್ಪತ್ರೆ ಇದೆ ಆದ್ರೆ ವೈದ್ಯರೇ ಇಲ್ಲ !! ಬೆಳಗಾವಿಯ ಹಿರೇಕುಂಬಿಯಲ್ಲಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಕೊರೋನಾ ಪೀಡಿತರ ಪರದಾಟ

Hirekumbi village Hospital Don't have Basic Facility

ಇದು ಬೆಳಗಾವಿ ಜಿಲ್ಲೆಯ ಸವದತ್ತಿಯ ಹಿರೇಕುಂಬಿ ತಾಲ್ಲೂಕಿನ ಆಸ್ಪತ್ರೆಯ ದುಸ್ಥಿತಿ. ಹತ್ತೂರಿಗೆ ಆರೋಗ್ಯ ಸೇವೆ ಕೊಡಬೇಕಾದ ಆಸ್ಪತ್ರೆಯೇ ವೈದ್ಯರು, ಸಿಬ್ಬಂದಿಯಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದೆ.

ಈ ತಾಲ್ಲೂಕಿನ ಕೊರೋನಾ ಆರ್ಭಟ ಹೆಚ್ಚಾಗಿದೆ. ಆದ್ರೆ ಆ ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯಾಧಿಕಾರಿಗಳೇ ಇಲ್ಲ. ಆರೋಗ್ಯ ಸಿಬ್ಬಂದಿಯೂ ಇಲ್ಲದೆ ಈ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ದುರಂತ ಅಂದ್ರೆ ೨೦೧೭ರಿಂದಲೇ ಈ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಲ್ಲ. ಆದ್ರೂ ಜಿಲ್ಲಾಡಳಿತ ಯಾವ ಕ್ರಮವನ್ನೂ ಕೈಗೊಂಡಿಲ್ಲ ಅನ್ನೋದು ಸ್ಥಳೀಯರ ಆರೋಪ.

ಇನ್ನು ಇಲ್ಲಿ ಇದ್ದ ಆಯುಷ್ ಇಲಾಖೆ ವೈದ್ಯರು ಮತ್ತು ಇತರ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದರಿAದ ರೋಗಿಗಳು ನಿತ್ಯ ಪರದಾಡೋ ಪರಿಸ್ಥಿತಿ ಬಂದಿದೆ.

ಹಿರೇಕುಂಬಿ ತಾಲ್ಲೂಕಿನಲ್ಲಿ ೨೮ ಸಾವಿರ ಜನಸಂಖ್ಯೆ ಇದೆ. ಆದ್ರೆ ಇಷ್ಟೊಂದು ಜನಸಂಖ್ಯೆ ಇರೋ ಈ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರೋದ್ರಿಂದ ಜನರನ್ನು ಭಾರೀ ಸಂಕಷ್ಟಕ್ಕೆ ದೂಡಿದೆ. ಅದ್ರಲ್ಲೂ ಬಡ ಜನರು ವೈದ್ಯಕೀಯ ಸೌಲಭ್ಯ ಸಿಗದೆ ತೊಂದರೆಗೀಡಾಗಿದ್ದಾರೆ. ಈ ಆಸ್ಪತ್ರೆಗೆ ವೈದ್ಯಾಧಿಕಾರಿ, ಎಫ್‌ಡಿಸಿ ಸೇರಿದಂತೆ ೨೦ ಹುದ್ದೆಗಳಿವೆ. ಆದ್ರೆ ಇಲ್ಲಿ ವೈದ್ಯಾಧಿಕಾರಿ ಹುದ್ದೆಯೇ ಖಾಲಿ ಇರೋದು ದುರಂತ.

ಈ ತಾಲ್ಲೂಕು ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ ಹಾಗೂ ಚಿಕಿತ್ಸೆ ಸಿಗದ ಕಾರಣ, ರೋಗಿಗಳು ೧೩ ಕಿ.ಮೀ ದೂರದ ಸವದತ್ತಿಗೆ ತೆರಳಬೇಕು. ಅಲ್ಲೂ ಬೆಡ್ ಕೊರತೆ ಇರೋ ಕಾರಣ ರೋಗಿಗಳು ಬೆಳಗಾವಿಗೇ ಹೋಗಬೇಕದ ಅನಿವಾರ್ಯತೆ ಎದುರಾಗಿದೆ.

ಈ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತರಲಾಗಿದೆ. ಆದ್ರೆ ಈವರೆಗೆ ಆರೋಗ್ಯ ಇಲಾಖೆ ಯಾವ ಕ್ರಮವನ್ನೂ ಕೈಗೊಳ್ಳದೆ ಹಿರೇಕುಂಬಿ ಜನರನ್ನು ಅನಾರೋಗ್ಯದಿಂದ ಒದ್ದಾಡುವಂತೆ ಮಾಡಿದೆ. ಕೊರೋನಾ ಸಂಕಷ್ಟ ಕಾಲದಲ್ಲಾದ್ರೂ ತುರ್ತಾಗಿ ಸರ್ಕಾರ ಇಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿ ಜನ ಪ್ರಾಣ ಉಳಿಸಬೇಕಾಗಿ ಹಿರೇಕುಂಬಿ ಮಂದಿ ಮನವಿ ಮಾಡುತ್ತಿದ್ದಾರೆ.

Exit mobile version