ಎಸ್‌ಸಿ, ಎಸ್‌ಟಿ ಎರಡನ್ನು ಹೊರತು ಪಡಿಸಿ ಇತರರ ಜಾತಿಗಣತಿ ಇಲ್ಲ: ಕೇಂದ್ರ ಸರ್ಕಾರ

ನವದೆಹಲಿ, ಜು. 20: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಹೊರತುಪಡಿಸಿ ಇತರ ಜನಸಂಖ್ಯೆಯ ಜಾತಿಗಣತಿಯನ್ನು ನಡೆಸದೆ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಮಾಹಿತಿ ನೀಡಿದರು.

ಮಹಾರಾಷ್ಟ್ರ ಮತ್ತು ಒಡಿಶಾ ಸರ್ಕಾರಗಳು ಮುಂಬರುವ ಜನಗಣತಿಯಲ್ಲಿ ಜಾತಿಯ ಕುರಿತು ವಿವರಗಳನ್ನು ಸಂಗ್ರಹಿಸಲು ಕೋರಿವೆ. ಆದರೆ, ನೀತಿಗೆ ಅನುಗುಣವಾಗಿ ಭಾರತ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತುಪಡಿಸಿ, ಇತರ ಜನಸಂಖ್ಯೆಯ ಜಾತಿವಾರು ಜನಗಣತಿ ಮಾಡದಿರಲು ನಿರ್ಧರಿಸಿದೆ ಎಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂವಿಧಾನದ ನಿಬಂಧನೆಗಳ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಆಯಾ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಜನಗಣತಿಯಲ್ಲಿ ಜಾತಿಗಳು ಮತ್ತು ಬುಡಕಟ್ಟುಗಳನ್ನು ವಿಶೇಷವಾಗಿ ಸಂವಿಧಾನದ (ಎಸ್‌ಸಿ) ಆದೇಶ 1950ರ ಪ್ರಕಾರ ಮತ್ತು ಸಂವಿಧಾನದ (ಎಸ್‌ಟಿ) ಆದೇಶ 1950 (ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವಂತೆ) ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಸೂಚಿಸಲಾಗಿದೆ ಎಂದರು.

Exit mobile version