ಬೆಂಗಳೂರು ಆ 17 : ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ತಮಿಳುನಾಡಿನಲ್ಲಿ 3 ರೂಪಾಯಿ ಕಡಿತವಾಗಿರುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ರಾಜ್ಯದಲ್ಲಿ ಆ ಪ್ರಸ್ತಾಪವಿಲ್ಲ ಎಂದು ಅವರು ಹೇಳಿದ್ದಾರೆ.
ನೆಗೆಟಿವ್ ರಿಪೋರ್ಟ್ ನಲ್ಲಿ ಗೋಲ್ ಮಾಲ್ : ಕೊರೊನಾ ನೆಗೆಟಿವ್ ರಿಪೋರ್ಟ್ ನಲ್ಲಿ ಗೋಲ್ ಮಾಲ್ ಬಗ್ಗೆ ಮಾತನಾಡಿದ ಅವರು ಹಣ ನೀಡಿದರೆ ಕೊರೋನಾ ನೆಗೆಟಿವ್ ವರದಿ ನೀಡುವ ಅಕ್ರಮ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾರು ಕೊರೋನಾ ರಿಪೋರ್ಟ್ ಬಗ್ಗೆ ಅಕ್ರಮ ನಡೆಸುತ್ತಿದ್ದಾರೋ ಅಂತವರನ್ನು ಪತ್ತೆಹಚ್ಚಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ, ಅಲ್ಲದೆ ನೆಗೆಟಿವ್ ರಿಪೋರ್ಟ್ ಎಂದು ಸುಳ್ಳು ವರದಿ ನೀಡಿದವರ ಮೇಲೆ ಮತ್ತೊಮ್ಮೆ ಟೆಸ್ಟ್ ಮಾಡಿಸಲು ಸೂಚಿಸುತ್ತೇನೆ ಎಂದರು.
ರಾಜ್ಯದ ಪ್ರಗತಿಯನ್ನು ತ್ವರಿತಗೊಳಿಸಲು ಮತ್ತು ಮೂಲಭೂತ ಸೌಕರ್ಯಗಳ ಹೆಚ್ಚಳ, ಬಡವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ನನ್ನ ಕೆಲಸವನ್ನು ಮುಖ್ಯಮಂತ್ರಿಯಾಗಿ ಪ್ರಾರಂಭ ಮಾಡಿದ್ದೇನೆ ಎಂದರು. ಜನರಿಗೆ ತಲುಪುವ ರೀತಿಯಲ್ಲಿ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತರಲು ಅಧಿಕಾರಿಗಳು ಕೆಲಸ ಮಾಡಬೇಕೆಂದು ಎಂದು ಸಹ ನಾನು ಸೂಚಿಸಿದ್ದು ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತದೆ ಹಾಗೂ ಮೊನ್ನೆ ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.