ಇವೇ ನಿಮ್ಮ ಮಗುವಿನ ಅಳುವಿನ ಹಿಂದಿರುವ ಕಾರಣಗಳು

ನಮ್ಮ ಸಮಸ್ಯೆಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗ ಅಂದರೆ ಅದು ಮಾತು. ಮಾತಿನ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ ಸಣ್ಣ ಮಕ್ಕಳಿಗೆ ಹಾಗಲ್ಲ. ಅವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಅವರಿಗಿರುವ ಒಂದೇ ಮಾರ್ಗ ಎಂದರೆ ಅಳುವುದು. ಅಳುವ ಮೂಲಕ ತಮ್ಮ ಬೇಡಿಕೆಗಳನ್ನ, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅದನ್ನು ಪೋಷಕರು ಅರ್ಥ ಮಾಡಿಕೊಂಡು ಮುಂದುವರಿಯಬೇಕು. ಹಾಗಾದರೆ ನಿಮ್ಮ ಮಗು ಸಾಮಾನ್ಯವಾಗಿ ಯಾವ ಕಾರಣಗಳಿಗೆ ಅಳುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಮಕ್ಕಳು ಅಳುವುದಕ್ಕೆ ಕಾರಣವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಸಿವಾಗಿರಬಹುದು:
ಇದು ಅತ್ಯಂತ ಪ್ರಮುಖ ಕಾರಣವಾಗಿದೆ. ತನಗೆ ಹಸಿವಾಗುತ್ತಿದೆ, ಆಹಾರ ನೀಡಿ ಎಂದು ಹೇಳಲು ಮಕ್ಕಳು ಅಳುವಿನ ದಾರಿ ಹಿಡಿಯುತ್ತದೆ. ಒಂದು ವೇಳೆ ಹಸಿವಿನಿಂದ ಅತ್ತರೆ ಹಾಲು ಕೊಟ್ಟ ಮೇಲೆ ಅದು ಸುಮ್ಮನಾಗುವುದು. ಮಗುವಿನಲ್ಲಿ ಹಸಿವಿನ ಚಿಹ್ನೆಗಳನ್ನು ನೀವು ಅರ್ಥಮಾಡಿಕೊಂಡರೆ, ಅದು ಅಳುವ ಮುನ್ನವೇ ನೀವು ಹಾಲು ನೀಡಬಹುದು. ಅದು ಯಾವ ಸಮಯಕ್ಕೆ ಅಳುತ್ತದೆ ಎನ್ನುವುದರ ಮೇಲೆ ಹಸಿವು ನಿಂತಿರುತ್ತದೆ. ತಾಯಿಯಾದವಳು ಮಗುವಿಗೆ ಎಷ್ಟು ಅವಧಿಯ ನಡುವೆ ಹಾಲು ನೀಡಬೇಕು ಎಂಬುದನ್ನು ತಿಳಿದಿರಬೇಕು.

ದಣಿವಾಗಿರಬಹುದು:
ಅರೇ, ಮಗುವಿಗೆ ದಣಿವಾ ಎಂದು ಆಶ್ಚರ್ಯ ಪಡಬೇಡಿ. ಮಕ್ಕಳು ಕೆಲಸ ಮಾಡದಿದ್ದರೂ, ಅವರಿಗೆ ಸುಸ್ತು, ದಣಿವಾಗುತ್ತದೆ. ಮಕ್ಕಳು ಆಟವಾಡುವುದರಿಂದ, ಕೈ ಕಾಲುಗಳನ್ನು ಆಡಿಸುವುದರಿಂದ ಅಥವಾ ಸಾಕಷ್ಟು ನಿದ್ರೆ ಬಾರದೇ ಇರುವುದು ಮಕ್ಕಳ ದಣಿವಿಗೆ ಕಾರಣವಾಗಬಹುದು. ಆಗ ಅದನ್ನ ಮಗು ಅಳುವಿನ ಮೂಲಕ ಹೊರಹಾಕುವುದು. ಈ ಸಮಯದಲ್ಲಿ ಪೋಷಕರು ಮಗುವನ್ನು ಮಲಗಿಸಬೇಕು.

ಗ್ಯಾಸ್ಟ್ರಿಕ್ ಆಗಿರಬಹುದು:
ಹೊಟ್ಟೆಯು ಗ್ಯಾಸ್ ಅಥವಾ ಹೊಟ್ಟೆನೋವಿನಂತಹ ಜೀರ್ಣ ಕ್ರಿಯೆಗೆ ಸಂಬಂಧಿತ ಸಮಸ್ಯೆಗಳಿಂದಲೂ ಮಗು ಸಾಮಾನ್ಯವಾಗಿ ಅಳುತ್ತದೆ. ಉದರಶೂಲೆ ಬಾಧೆ ಇರುವ ಶಿಶುಗಳು ದಿನಕ್ಕೆ ಕನಿಷ್ಠ ಮೂರು ಗಂಟೆ ಮತ್ತು ವಾರದಲ್ಲಿ ಕನಿಷ್ಠ ಮೂರು ದಿನ ಅಳುತ್ತಾರೆ ಎಂದು ಅಧ್ಯಯನ ತಿಳಿಸುತ್ತದೆ. ಇದಕ್ಕೆ ಮಗುವಿಗೆ ನೀಡುವ ಆಹಾರ ಪದ್ಧತಿಯೇ ಕಾರಣವಿರಬಹುದು.ಮಗುವಿನ ಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಕೊಡಿಸಬೇಕು.

ನಿದ್ರೆಯ ಕೊರತೆ:
ಮಗುವಿಗೆ ಆರು ತಿಂಗಳು ತುಂಬಿದ ನಂತರ, ತಾವಾಗಿಯೇ ಮಲಗಲು ಕಲಿಯುತ್ತಾರೆ, ಆದರೆ ಕೆಲವೊಮ್ಮೆ ಶಿಶುಗಳು ತಾಯಿ ಅಥವಾ ತಂದೆ ಇಲ್ಲದೆ ಮಲಗುವುದಿಲ್ಲ. ನಿದ್ರೆಯ ವೇಳಾಪಟ್ಟಿಗೆ ಹೊಂದಿಕೊಂಡ ನಂತರವೂ, ಮಗುವಿಗೆ ನೀವು ಇಲ್ಲದೆ ನಿದ್ರಿಸಲು ತೊಂದರೆಯಾಗಬಹುದು. ಆಗ ಮಕ್ಕಳು ಅಳುತ್ತಾರೆ. ಒಬ್ಬರೇ ಮಲಗುವುದನ್ನು ಕಲಿಯುವ ತನಕ ಮಗುವಿನ ಜೊತೆ ಮಲಗಿರುವುದು ಉತ್ತಮ.

ಆಹಾರ ಇಳಿಯದಿದ್ದರೆ:
ಮಗು ಹಾಲು ಕುಡಿದ ಅಥವಾ ಸೇವಿಸಿದ ನಂತರ ಅಳುತ್ತಿದ್ದರೆ ಅದಕ್ಕೆ ಏನೋ ಸರಿಯಿಲ್ಲ ಎಂದರ್ಥ. ಅಂದರೆ ಸೇವಿಸಿದ ಹಾಲು ಸರಿಯಾಗಿ ಕೆಳಗಿಳಿಯಲಿಲ್ಲ, ಆಗ ಅದನ್ನು ಬೆನ್ನಿಗೆ ಹಾಕಿಕೊಂಡು ತಟ್ಟಿ ಸಮಾಧಾನ ಪಡಿಸಿಬೇಕು. ಇಲ್ಲದಿದ್ದರೆ ಅದು ಮಗುವಿಗೆ ಅನೇಕ ಬಾರಿ ಅನಾನುಕೂಲವಾಗುತ್ತದೆ, ಅಳಲು ಪ್ರಾರಂಭಿಸುತ್ತಾರೆ.

Exit mobile version