ಮೂರನೇ ಏಕದಿನ: ಶ್ರೀಲಂಕಾ ತಂಡಕ್ಕೆ 3 ವಿಕೆಟ್ ಜಯ: ಸರಣಿ ಮುಡಿಗೇರಿಸಿಕೊಂಡ ಭಾರತ

ಕೊಲಂಬೊ, ಜು. 24: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾ, ಪ್ರವಾಸಿ ಭಾರತದ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ 3 ವಿಕೆಟ್​ಗಳಿಂದ ಜಯ ಸಾಧಿಸಿತು.

ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 43.1 ಓವರ್​ನಲ್ಲಿ 225 ರನ್​ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಸವಾಲನ್ನು 39 ಓವರ್​ನಲ್ಲಿ ಬೆನ್ನತ್ತಿದ ಶ್ರೀಲಂಕಾ ತಂಡ 3 ವಿಕೆಟ್ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನ 2-1ರ ಅಂತರದಿಂದ ಗೆದ್ದ ಭಾರತ ಪ್ರಶಸ್ತಿ ಮುಡಿಗೇರಿಸಿತು.

ಮಳೆ ಬಂದ ಕಾರಣ ಡಿಆರ್​ಎಸ್ ನಿಯಮದಂತೆ 47 ಓವರ್​ನಲ್ಲಿ 227 ರನ್​ಗಳ ಗುರಿ ಪಡೆದ ಶ್ರೀಲಂಕಾಗೆ ಉತ್ತಮ ಆರಂಭ ಒದಗಿಸುವಲ್ಲಿ ಅವಿಷ್ಕಾ ಫರ್ನಾಂಡೊ ಯಶಸ್ವಿಯಾದರು. ಆರಂಭದಿಂದಲೂ ಭಾರತದ ಬೌಲರುಗಳನ್ನು ಸಮರ್ಥವಾಗಿ ಎದುರಿಸಿದ ಅವಿಷ್ಕಾ(76) ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರು. ಆದರೆ ಇನ್ನೊಂದೆಡೆ ಮಿನೋದ್ ಭನುಕಾ(7) ವಿಕೆಟ್ ಪಡೆಯುವ ಕೃಷ್ಣಪ್ಪ ಗೌತಮ್ ಚೊಚ್ಚಲ ಪಂದ್ಯದಲ್ಲೇ ವಿಕೆಟ್ ಖಾತೆ ತೆರೆದರು. 

ಬಳಿಕ ಅವಿಷ್ಕಾ ಜೊತೆಗೂಡಿದ ಭಾನುಕ ರಾಜಪಕ್ಸ(65) ಶತಕದ ಜೊತೆಯಾಟವಾಡಿದರು. ಆದರೆ 23ನೇ ಓವರ್​ನಲ್ಲಿ ಯುವ ವೇಗಿ ಚೇತನ್ ಸಕರಿಯಾ ಎಸೆತದಲ್ಲಿ ಭಾನುಕ ರಾಜಪಕ್ಸ (65) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವಾ(2) ಕೂಡ ಚೇತನ್ ಸಕರಿಯಾ ಬೌಲಿಂಗ್ ನಲ್ಲಿ ಔಟಾದರು. ಒಂದೆಡೆ ವಿಕೆಟ್ ಗಳ ಪತನವಾದರೂ ತಾಳ್ಮೆಯ ಆಟವಾಡಿದ ಅವಿಷ್ಕಾ, ತಂಡದ ಗೆಲುವಿನ ಬೆನ್ನೆಲುಬಾಗಿ ನಿಂತರು. ಪರಿಣಾಮ ಶ್ರೀಲಂಕಾ 34ನೇ ಓವರ್​ನಲ್ಲಿ 200ರ ಗಡಿದಾಟಿಸಿದರು. ಅಂತಿಮವಾಗಿ ಶ್ರೀಲಂಕಾ 39 ಓವರ್​ನಲ್ಲಿ ಗುರಿ ಬೆನ್ನತ್ತುವ ಮೂಲಕ ಗೆಲುವು ದಾಖಲಿಸಿತು. 

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಬ್ಯಾಟ್ಸಮನ್ ಗಳ ವೈಫಲ್ಯ ಅನುಭವಿಸಿತು. ನಾಯಕ ಶಿಖರ್ ಧವನ್ ಕೇವಲ 13 ರನ್​ಗಳಿಸಿ ಮೊದಲಿಗರಾಗಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಶ್ರೀಲಂಕಾ ಬೌಲರುಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿದ ಪೃಥ್ವಿ 49 ರನ್ ಬಾರಿಸಿ ಔಟಾದರು. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಎಚ್ಚರಿಕೆ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಿದರು. ಸ್ಯಾಮ್ಸನ್-ಮನೀಶ್ ಪಾಂಡೆ ಉತ್ತಮ ಜೊತೆಯಾಟವಾಡಿ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದ ಈ ಜೋಡಿ ತಂಡದ ಮೊತ್ತವನ್ನು100ರ ಗಡಿ ದಾಟಿಸಿದರು. ಇದೇ ವೇಳೆ ಅರ್ಧಶತಕದತ್ತ ಸಾಗುತ್ತಿದ್ದ ಸ್ಯಾಮ್ಸನ್(46) ಜಯವಿಕ್ರಮ ಎಸೆತದಲ್ಲಿ ಅವಿಷ್ಕಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಮನೀಶ್ ಪಾಂಡೆ ಕೇವಲ 11 ರನ್​ಗಳಿಸಿ ಔಟಾದರೆ. ಸೂರ್ಯ ಕುಮಾರ್ ಯಾದವ್ 40 ರನ್ ಬಾರಿಸಿದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(19) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇನ್ನು ಪದಾರ್ಪಣೆ ಪಂದ್ಯದಲ್ಲಿ ಮಿಂಚುವಲ್ಲಿ ನಿತೀಶ್ ರಾಣಾ ಹಾಗೂ ಕೃಷ್ಣಪ್ಪ ಗೌತಮ್ ವಿಫಲರಾದರು. ಉಳಿದಂತೆ ರಾಹುಲ್ ಚಹರ್(13) ಹಾಗೂ ನವದೀಪ್ ಸೈನಿ (15) ಒಂದಷ್ಟು ಪ್ರತಿರೋಧ ತೋರಿದರು. ಅಂತಿಮವಾಗಿ ಟೀಮ್ ಇಂಡಿಯಾ 43.1 ಓವರ್​ನಲ್ಲಿ 225 ರನ್​ಗಳಿಗೆ ಸರ್ವಪತನ ಕಂಡಿತು.

ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಲಂಕಾ‌ ಗೆಲುವಿಗೆ ಕಾರಣವಾದ ಅಮಿಷ್ಕಾ ಫರ್ನಾಂಡೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Exit mobile version