ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಹಿರಿಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಅಂತ್ಯಕ್ರಿಯೆ

ಬೆಂಗಳೂರು(ಜೂ.12): ಕೊರೋನಾ ಸೋಂಕಿನಿಂದ ನಿನ್ನೆ ನಿಧನರಾದ ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಜ್ಞಾನ ಭಾರತಿಯ ಬಾಬಾ ಸಾಹೇಬ್​ ಡಾ.ಬಿ.ಆರ್.ಅಂಬೇಡ್ಕರ್​ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.  ಬೆಳಗ್ಗೆ 11 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಆ ಬಳಿಕ 12 ಗಂಟೆಯ ಒಳಗೆ ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.  ಪೊಲೀಸರು ಹಾಗೂ ಮಾರ್ಷಲ್ಸ್ ಕೂಡ ಬಂದೋಬಸ್ತ್ ನಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದ್ದರೆ,  ಬೆಂಗಳೂರು ಪಶ್ಚಿಮ ಡಿಸಿಪಿ ಸಂಜೀವ್ ಪಾಟೀಲ್ ಬಂದೋಬಸ್ತ್  ಸಿದ್ಧತೆ ಪರಿಶೀಲನೆ ಮಾಡಿದ್ದಾರೆ.

ಇನ್ನು, ಕವಿ ಡಾ.ಸಿದ್ದಲಿಂಗಯ್ಯನವರಿಗೆ ಅಂತಿಮ ನಮನ ಸಲ್ಲಿಸಲು ಜನ ಸಾಗರವೇ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗದ ನಟರೂ ಸಹ ಸಾಹಿತಿಗಳ ಅಂತಿಮ ದರ್ಶನ ಪಡೆದಿದ್ದಾರೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿಕೆ ಸುರೇಶ್ ಸಿದ್ದಲಿಂಗಯ್ಯ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟರಾದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಅವರೂ ಕೂಡ ಅಂತಿಮ ದರ್ಶನ ಪಡೆದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಹಿತಿ ಸಿದ್ದಲಿಂಗಯ್ಯನವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು,  ಇದು ಅಕಾಲಿಕವಾದ ನಿಧನ. ಸಿದ್ದಲಿಂಗಯ್ಯ ಎಲ್ಲಾ ದಲಿತರ ಪರ ಧ್ವನಿಯಾಗಿದ್ದರು.  ನೋವುಂಡ ಜನರ ಧ್ವನಿಯಾಗಿ, ಅವರ ಕವನಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಅದಕ್ಕಾಗಿ ಅವರನ್ನ ದಲಿತ ಕವಿ ಎಂದು ಕರೆಯುತ್ತಿದ್ದರು.  ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಎಷ್ಟೊಂದು ಎತ್ತರಕ್ಕೆ ಬೆಳೆದಿದ್ದರು. ಅವ್ರು ಕೊನೆಯವರೆಗೂ ಕೂಡ ದಲಿತರ ಉದ್ದಾರ, ಏಳಿಗೆಗಾಗಿ ಪ್ರಯತ್ನಗಳನ್ನ ಮಾಡಿದರು ಎಂದರು.

ಮುಂದುವರೆದ ಅವರು, 1974 ರಿಂದ ನನಗೆ ಪರಿಚಯ. ಯಾವಾಗ ಸಿಕ್ಕಿದ್ರೂ ಆತ್ಮೀಯತೆಯಿಂದ ಮಾತನಾಡಿಸ್ತಿದ್ರು. ಸಿಕ್ಕಾಗ ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿದ್ರು. 2 ಸಲ, ಮೇಲ್ಮನೆಯ ಸದಸ್ಯರಾಗಿದ್ರು. ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪಶಸ್ತಿಗಳು ಅವರಿಗೆ ಲಭಿಸಿದ್ದವು.  ಅವರ ನಿಧನದಿಂದಾಗಿ ದಲಿತ ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ. ಅವರ ಜಾಗ ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಿಎಂ ಆದಾಗ, ಪ್ರತಿಸಲ ಬಜೆಟ್ ಮಂಡಿಸುವಾಗ, ದಲಿತ ಸಮುದಾಯಗಳ ಬಗ್ಗೆ ಚರ್ಚಿಸಲು ಕರಿತಾ ಇದ್ದೆ. ಒಳ್ಳೆಯ ಸಲಹೆಗಳನ್ನ ಕೊಡ್ತಾ ಇದ್ರು. ಅವ್ರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ನಷ್ಟ ಎಂದು ದುಃಖಿತರಾದರು.

ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಲಾಗಿದ್ದು,  ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ಕವಿಯ ಅಗಲಿಕೆಗೆ ಇಡೀ ಕರುನಾಡಿನ ಜನರೇ ಕಂಬಿನಿ ಮಿಡಿದಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಸೇರಿ ಹಲವು ಗಣ್ಯರು ಡಾ.ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಕರ್ನಾಟಕದ ಸಾಹಿತಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಸಿದ್ದಲಿಂಗಯ್ಯ ಅವರು ಕೊರೋನಾ ಹಾಗೂ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

Exit mobile version