ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್

ನವದೆಹಲಿ,ಮಾ,26: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಭಾರತ್‌ ಬಂದ್​ಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರೆ ನೀಡಿದೆ. 119 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸ್ತಿರುವ ರೈತರ ಹೋರಾಟಕ್ಕೆ ಇಂದು 4 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಈ ಹೋರಾಟಕ್ಕೆ ರಾಜ್ಯ ರೈತ ಸಂಘಗಳು, ಸಂಯುಕ್ತ ಹೋರಾಟ-ಕರ್ನಾಟಕ ಸಮಿತಿ ಸೇರಿದಂತೆ ಕೆಲ ಸಂಘಟನೆಗಳು ಬೆಂಬಲ ನೀಡಿವೆ.

ಆಂಧ್ರ ಪ್ರದೇಶದಲ್ಲಿ ಭಾರತ್ ಬಂದ್‌ಗೆ ವ್ಯಾಪಕ‌ ಬೆಂಬಲ ಸಿಕ್ಕಿದೆ. ಆಂಧ್ರ ಪ್ರದೇಶದ ಗುಂಟೂರು, ವಿಜಯನಗರಂ, ಕರ್ನೂಲು, ಶ್ರೀಕಾಕುಳಂ, ವಿಶಾಖಪಟ್ಟಣಂ ಸೇರಿ ಅನೇಕ‌ ಜಿಲ್ಲೆಗಳಲ್ಲಿ‌ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣಗಳಿಗೆ ಬಸ್​ಗಳು ಸೀಮಿತವಾಗಿದ್ದು ರಸ್ತೆಗಳು ಬಿಕೋ ಎನ್ನುತ್ತಿವೆ. ಕೆಲ ಸಂಘಟನೆಗಳು ಪ್ರತಿಭಟನೆ ಸಹ ನಡೆಸುತ್ತಿವೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ. 3 ಎಸಿಪಿ, 8 ಇನ್ಸ್ಪೆಕ್ಟರ್, 20 ಸಬ್ ಇನ್ಸ್ಪೆಕ್ಟರ್, ಸೇರಿದಂತೆ 350 ಪೊಲೀಸರಿಂದ ಕಣ್ಗಾವಲು ಇಡಲಾಗಿದೆ. ಜೊತೆಗೆ 4 ಕೆಎಸ್‌ಆರ್‌ಪಿ‌ ತುಕಡಿ ಜೊತೆಗೆ 20 ಬಿಎಂಟಿಸಿ ಬಸ್ ನಿಯೋಜನೆ ಮಾಡಲಾಗಿದೆ. 10 ಗಂಟೆಗೆ ಟೌನ್ ಹಾಲ್ ಮುಂದೆ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುತ್ತದೆ. ನಂತರ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಅನ್ನದಾತರು ಶವಯಾತ್ರೆ ನಡೆಸಲಿದ್ದಾರೆ.

Exit mobile version