ಇಂದು ಭಾರತ-ಶ್ರೀಲಂಕಾ 2ನೇ ಏಕದಿನ ಪಂದ್ಯ: ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿರುವ ಟೀಂ ಇಂಡಿಯಾ

ಕೊಲಂಬೊ, ಜು. 20: ಪ್ರವಾಸಿ ಭಾರತ ಹಾಗೂ ಅತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯ ಇಂದು(ಮಂಗಳವಾರ) ನಡೆಯಲಿದ್ದು, ಇಂದಿನ ಪಂದ್ಯ ಗೆದ್ದು ವಿಶ್ವ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಲು ಟೀಂ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ.

ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯುವ ಪಂದ್ಯಕ್ಕಾಗಿ ಉಭಯ ತಂಡಗಳು ತಯಾರಿ ಮಾಡಿಕೊಂಡಿವೆ. ಮೊದಲ ಪಂದ್ಯದಲ್ಲಿ ಏಳು ವಿಕೆಟ್ ಗಳ ಭರ್ಜರಿ ಗೆಲುವು ಕಂಡಿರುವ ಶಿಖರ್ ಧವನ್ ಸಾರಥ್ಯದ ಟೀಂ ಇಂಡಿಯಾ ಗೆಲುವಿನ ಉತ್ಸಾಹದಲ್ಲಿದ್ದು, ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರ ಹೊಂದಿದೆ. ಆದರೆ ಬ್ಯಾಟಿಂಗ್ ವೈಫಲ್ಯದಿಂದ ಸೋಲಿನ ಕಹಿ ಅನುಭವಿಸಿರುವ ಶ್ರೀಲಂಕಾ ಕಮ್ ಬ್ಯಾಕ್ ಮಾಡಿ ಸರಣಿ ಜೀವಂತವಾಗಿರಿಸುವ ನಿರೀಕ್ಷೆಯಲ್ಲಿದೆ.

ವಿಶ್ವದಾಖಲೆ ನಿರೀಕ್ಷೆಯಲ್ಲಿ ಭಾರತ
ಮೊದಲ ಪಂದ್ಯದಲ್ಲಿ ಗೆಲುವಿನ ನಗೆಬೀರಿರುವ ಭಾರತ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ವಿರುದ್ಧ 92ನೇ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಲಂಕಾ ವಿರುದ್ಧ 93 ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಲಿದೆ. ಈ ಮೂಲಕ ಒಂದು ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯವನ್ನು ಗೆದ್ದ ಟೀಮ್ ಭಾರತ ಆಗಲಿದ್ದು, ಇದು ವಿಶ್ವ ದಾಖಲೆಯಾಗಲಿದೆ.

ಅಲ್ಲದೆ 2007 ರಿಂದ ಸತತವಾಗಿ ಲಂಕಾ ವಿರುದ್ಧ ಸರಣಿ ಜಯ ಸಾಧಿಸುತ್ತಾ ಬಂದಿರುವ ಭಾರತ ಈ ಸರಣಿಯನ್ನೂ ಗೆದ್ದಲ್ಲಿ ಲಂಕಾ ವಿರುದ್ಧ ಸತತವಾಗಿ 9ನೇ ಸರಣಿ ಗೆದ್ದಂತಾಗುತ್ತದೆ. ಇದಲ್ಲದೆ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವತ್ತ ಟೀಂ ಇಂಡಿಯಾ ಆಟಗಾರರು ನಿರೀಕ್ಷೆ ಹೊಂದಿದ್ದಾರೆ. ಸದ್ಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಜಯ ಸಾಧಿಸಿದ ಟೀಮ್​ಗಳ ಸಾಲಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡ ಜಂಟಿ ಸ್ಥಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಒಟ್ಟು 92 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ. ಇತ್ತ ಆಸ್ಟ್ರೇಲಿಯಾ ಕೂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿದೆ. ಹೀಗಾಗಿ ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳು ಸಾಕಷ್ಟು ತಯಾರಿ ಮಾಡಿಕೊಂಡು ಸಜ್ಜಾಗಿವೆ.

Exit mobile version