ಟೋಕಿಯೋ ಒಲಂಪಿಕ್ಸ್: ಆರ್ಚರಿಯಲ್ಲಿ ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಅತನು ದಾಸ್

ಟೋಕಿಯೋ: ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾದ ಓಹ್‌ ಜಿನ್‌ ಹಿಯೆಕ್‌ ವಿರುದ್ಧ ಗೆಲುವು ದಾಖಲಿಸಿರುವ ಭಾರತದ ಬಿಲ್ಲುಗಾರ ಅತನು ದಾಸ್ ಪ್ರಿ-ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್ ಅವರು ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಬಿಲ್ಲುಗಾರ ಅತನು ದಾಸ್, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಗೆಲುವು ದಾಖಲಿಸಿದರು. ಬಳಿಕ ಅದೇ ಲಯ ಕಾಪಾಡಿಕೊಂಡು ಜಿನ್ ಹಿಯೆಕ್ ವಿರುದ್ಧವೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷವೆಂದರೆ ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಅವರು ನಿನ್ನೆಯಷ್ಟೇ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

Exit mobile version