ಟೋಕಿಯೋ ಒಲಿಂಪಿಕ್ಸ್‌: ಹಾಕಿಯಲ್ಲಿ ಬ್ರಿಟನ್‌ ವಿರುದ್ಧ ಸೋಲು, ಭಾರತ ಮಹಿಳಾ ತಂಡಕ್ಕೆ ಕೈತಪ್ಪಿದ ಕಂಚು

ಟೋಕಿಯೋ, ಆ. 06: ಒಲಂಪಿಕ್ಸ್‌ ಟೂರ್ನಿಯಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದ ಭಾರತ ಮಹಿಳಾ ಹಾಕಿ ತಂಡದ ಕಂಚಿನ ಪದಕ ಗೆಲ್ಲುವ ಆಸೆ ಕಮರಿ ಹೋಗಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿದವು. ಆರಂಭದಿಂದಲೇ ಎರಡು ತಂಡದ ಆಟಗಾರರು ಆಕ್ರಮಣಕಾರಿ ಪ್ರದರ್ಶನ ನೀಡಿದರೂ, ಪಂದ್ಯದ ಮೊದಲ ಕ್ವಾರ್ಟರ್ ನಲ್ಲಿ ಯಾವುದೇ ಗೋಲುಗಳಿಸಲು ಆಗಲಿಲ್ಲ. ಅದ್ಭುತ ನಿರ್ವಹಣೆ ತೋರಿದ ಭಾರತದ ಗೋಲ್ ಕೀಪರ್ ಸವಿತಾ ಪುನಿಯಾ, ಗ್ರೇಟ್ ಬ್ರಿಟನ್ ತಂಡದ ಗೋಲು ಗಳಿಸುವ ಪ್ರಯತ್ನವನ್ನು ತಡೆಯುವ ಮೂಲಕ ಭಾರತಕ್ಕೆ ಆಸರೆಯಾದರು.

ಆದರೆ ಎರಡನೇ ಕ್ವಾರ್ಟರ್ ನಲ್ಲಿ ಬಲಿಷ್ಠ ಪ್ರದರ್ಶನ ನೀಡಿದ ಎರಡು ತಂಡಗಳು, ಗೋಲಿನ ಖಾತೆ ತೆರೆದವು. ಮೊದಲಿಗೆ ಗೋಲು ಬಾರಿಸಿದ ಗ್ರೇಟ್ ಬ್ರಿಟನ್ ಸತತ ಎರಡು ಗೋಲು ಬಾರಿಸಿ ಪಂದ್ಯದ ಮೇಲೆ ಹಿಡಿತ‌ ಸಾಧಿಸಿತು. ಕೂಡಲೇ ತಿರುಗೇಟು ನೀಡಿದ ಭಾರತ, ಎರಡು ಗೋಲುಗಳಿಸುವ ಮೂಲಕ ಸಮಬಲ‌ ಸಾಧಿಸಿತು. ಈ ಹಂತದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದ ಭಾರತದ ಆಟಗಾರ್ತಿಯರು ಮತ್ತೊಂದು ಗೋಲು ಬಾರಿಸುವ ಮೂಲಕ ಗೋಲಿನ ಅಂತರವನ್ನು 3-2ಕ್ಕೆ ಹೆಚ್ಚಿಸಿದರು.

ಆದರೆ, ಬ್ರಿಟನ್ ನಾಯಕಿ ಸಮಬಲದ ಗೋಲು ದಾಖಲಿಸಿದರು. ಕೊನೆಯ ಕಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಬ್ರಿಟನ್ ಮಗದೊಂದು ಗೋಲು ಬಾರಿಸಿ 4-3 ಗೋಲುಗಳ ಗೆಲುವು ದಾಖಲಿಸಿತು. ಕೊನೆಯ ಹಂತದಲ್ಲಿ ಭಾರತ ಶಕ್ತಿಮೀರಿ ಪ್ರಯತ್ನಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಸೋಲಿನ ಆಘಾತದಿಂದ ಭಾರತೀಯ ಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಟ್ಟರು.

Exit mobile version