ಟೋಕಿಯೋ ಒಲಂಪಿಕ್ಸ್: ಭಾರತದ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ: 41 ವರ್ಷದ ಒಲಂಪಿಕ್ಸ್ ಪದಕದ ಕನಸು ನನಸು

ಟೋಕಿಯೋ, ಆ. 05: ಕೊನೆ ಕ್ಷಣದವರೆಗೂ ಕುತೂಹಲ ಹಾಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಪುರುಷರ ಹಾಕಿ ತಂಡ, ಟೋಕಿಯೋ ಒಲಂಪಿಕ್ಸ್ ಟೂರ್ನಿಯಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಒಲಂಪಿಕ್ಸ್ ಪದಕ ಗೆಲ್ಲುವ ಭಾರತದ 41 ವರ್ಷಗಳ ಕನಸು ನನಸಾಗಿದೆ.

ಮೂರನೇ ಸ್ಥಾನಕ್ಕಾಗಿ ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಿತು. ಪಂದ್ಯದ ಮೊದಲ ಕ್ವಾರ್ಟರ್ ನಲ್ಲಿ ಗೋಲಿನ ಖಾತೆ ತೆರೆದ ಜರ್ಮನಿ ಆರಂಭಿಕ ಮೇಲುಗೈ ಸಾಧಿಸಿತು. ಇದಾದ ಬಳಿಕ ಪಂದ್ಯದ 24 ಹಾಗೂ 25ನೇ ನಿಮಿಷದಲ್ಲಿ ಎರಡು ಗೋಲು ಬಾರಿಸಿದ ಜರ್ಮನಿ 3-0 ಅಂತರದ ಬಲಿಷ್ಠ ಮುನ್ನಡೆ ಸಾಧಿಸಿತು. ಆದರೆ ಇದಾದ ಕೆಲವೇ ಕ್ಷಣದಲ್ಲಿ ಕಮ್ ಬ್ಯಾಕ್ ಮಾಡಿದ ಭಾರತದ ಪರ ಸಿಮ್ರನ್ಜಿತ್ ಸಿಂಗ್, 17ನೇ ಮೊದಲ ಗೋಲು ಬಾರಿಸುವ ಮೂಲಕ ಗೋಲಿನ ಖಾತೆ ತೆರೆದರೆ. 27ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಹಾಗೂ 29ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಪಂದ್ಯದ ಹಾಫ್ ಟೈಂನಲ್ಲಿ ಎರಡು ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದವು.

ಆದರೆ ಮೂರನೇ ಕ್ವಾರ್ಟರ್‌ನ ಆರಂಭದಲ್ಲೇ ಅದ್ಭುತ ಕಮ್ ಬ್ಯಾಕ್ ಮಾಡಿದ ಭಾರತದ ಪರ ರುಪೀಂದರ್ ಪಾಲ್‌ಸಿಂಗ್ 31ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ 4-3ರ ಮುನ್ನಡೆ ತಂದುಕೊಟ್ಟರೆ. 34ನೇ ನಿಮಿಷದಲ್ಲಿ ಸಿಮ್ರನ್ಜಿತ್ ಸಿಂಗ್, ವೈಯಕ್ತಿಕ ಎರಡನೇ ಗೋಲು ಬಾರಿಸುವ ಮೂಲಕ ಭಾರತಕ್ಕೆ 5-3ರ ಮುನ್ನಡೆ ಕಲ್ಪಿಸಿದರು.‌ ಈ ಹಂತದಲ್ಲಿ ಭಾರತೀಯ ಆಟಗಾರರು ಜರ್ಮನಿ ತಂಡದ ಮೇಲು ಸಂಪೂರ್ಣ ಪ್ರಾಬಲ್ಯ ಸಾಧಿಸಿ ಸುಲಭದ ಗೆಲುವಿನ ನಿರೀಕ್ಷೆ ಮೂಡಿಸಿದರು.

ಆದರೆ ನಾಲ್ಕನೇ ಕ್ವಾರ್ಟರ್ ನಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಜರ್ಮನಿ, ಪಂದ್ಯದ 48ನೇ ನಿಮಿಷದಲ್ಲಿ ನಾಲ್ಕನೇ ಗೋಲು ಬಾರಿಸುವ ಮೂಲಕ ಗೋಲಿನ ಅಂತರವನ್ನು 4-5ಕ್ಕೆ ಇಳಿಸಿದರು. ಈ ಹಂತದಲ್ಲಿ ಪಂದ್ಯದ ರೋಚಕತೆ ಇನ್ನಷ್ಟು ಹೆಚ್ಚಾಯಿತು. ಪರಿಣಾಮ ಎರಡು ತಂಡಗಳು ಕೊನೆ ಕ್ಷಣದವರೆಗೂ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದವು.‌ ಆದರೆ ಪಂದ್ಯದ ಕಡೆಯ ಕ್ಷಣದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಜರ್ಮನಿ ತಂಡಕ್ಕೆ ಗೋಲುಗಳಿಸುವುದನ್ನ ತಡೆದ ಭಾರತದ ಗೋಲ್ ಕೀಪರ್ ಶ್ರೀಜೇಶ್, ಭಾರತದ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

Exit mobile version