ಟೋಕಿಯೋ ಒಲಂಪಿಕ್ಸ್: ಪುರುಷರ ಹಾಕಿ ಸೆಮಿಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ ಭಾರತಕ್ಕೆ ಸೋಲು: ಚಿನ್ನದ ಪದಕ ಗೆಲ್ಲುವ ಕನಸು ಭಗ್ನ

ಟೋಕಿಯೋ: ಭಾರೀ ನಿರೀಕ್ಷೆ ಮೂಡಿಸಿದ್ದ ಟೋಕಿಯೋ ಒಲಂಪಿಕ್ಸ್ 2020ರ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ 5-2 ಅಂತರದ ಸೋಲನುಭವಿಸಿದ್ದು, ಆ ಮೂಲಕ ಚಿನ್ನದ ಪದಕದ ಕನಸು ಭಗ್ನಗೊಂಡಿದೆ.

ನಾಲ್ಕು ದಶಕಗಳ ಬಳಿಕ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತ ಹಾಕಿ ತಂಡ ಕೋಟ್ಯಾಂತರ ಕ್ರೀಡಾಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿತ್ತು. ಆದರೆ ತೀವ್ರ ಪೈಪೋಟಿಯಿಂದ ಕೂಡಿದ್ದ ಸೆಮಿಫೈನಲ್ ಹಣಾಹಣಿಯಲ್ಲಿ ಬೆಲ್ಜಿಯಂ ಆಟಗಾರರ ಆಕ್ರಮಣಕಾರಿ ಆಟಕ್ಕೆ ಶರಣಾದ ಭಾರತ, 5-2 ಅಂತರದಿಂದ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಚಿನ್ನದ ಪದಕ ಗೆಲ್ಲುವ ಭಾರತೀಯ ಆಟಗಾರರ ಕನಸು ಭಗ್ನಗೊಂಡಿದ್ದು, ಮೂರನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.

ಪಂದ್ಯದ ಆರಂಭದಲ್ಲಿ ಉತ್ತಮ ಪ್ರದರ್ಶ‌ನ ನೀಡಿದ ಭಾರತ ಒಂದು ಹಂತದಲ್ಲಿ 2-1 ಗೋಲಿನ ಅಂತರದಲ್ಲಿ ಮೇಲುಗೈ ಸಾಧಿಸಿತ್ತು.‌ ಆದರೆ ಎರಡನೇ ಕ್ವಾರ್ಟರ್ ಅಂತ್ಯಕ್ಕೆ ಬಲಿಷ್ಠ ಕಮ್ ಬ್ಯಾಕ್ ಮಾಡಿದ ಬೆಲ್ಜಿಯಂ, ಮತ್ತೊಂದು ಗೋಲು ಬಾರಿಸುವ ಮೂಲಕ 2-2 ಗೋಲುಗಳಿಂದ ಸಮಬಲದ ಸಾಧಿಸಿತ್ತು. ಆದರೆ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ 3ನೇ ಕ್ವಾರ್ಟರ್ ನಲ್ಲಿ ಎರಡು ತಂಡಗಳು ಯಾವುದೇ ಗೋಲುಗಳಿಸಲಿಲ್ಲ. ಪರಿಣಾಮ 4ನೇ ಕ್ವಾರ್ಟರ್ ಎರಡು ತಂಡಗಳಿಗೂ ಅತ್ಯಂತ ನಿರ್ಣಾಯಕವಾಯಿತು.

ಈ ಹಂತದಲ್ಲಿ ಭಾರತೀಯ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಹೇರಿದ ಬೆಲ್ಜಿಯಂ, ಮೂರನೇ ಗೋಲು ಬಾರಿಸುವ ಮೂಲಕ 3-2ರ ಅಂತರದಲ್ಲಿ ಮುನ್ನಡೆ ಸಾಧಿಸಿತು.‌ ಇದಾದ ನಂತರವೂ ಆಕ್ರಮಣಕಾರಿ ಪ್ರದರ್ಶನ ಮುಂದುವರಿಸಿದ ಬೆಲ್ಜಿಯಂ, ಇನ್ನೆರಡು ಗೋಲು ಬಾರಿಸುವ ಮೂಲಕ 5-2ರ ಅಂತರದಲ್ಲಿ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿತು.

ಇಡೀ ಪಂದ್ಯದಲ್ಲಿ ಒಂದರ ಹಿಂದೆ ಒಂದರಂತೆ ದೊರೆತ ಪೆನಾಲ್ಟಿ ಅವಕಾಶದ ಸಂಪೂರ್ಣ ಲಾಭ ಪಡೆದ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪಂದ್ಯದಲ್ಲಿ ದೊರೆತ 14 ಪೆನಾಲ್ಟಿ ಅವಕಾಶದಲ್ಲಿ 3 ಗೋಲು ಬಾರಿಸಿ ಪಂದ್ಯದಲ್ಲಿ ಗೆಲುವಿನ ನಗೆಬೀರಿತು.

Exit mobile version