ಟೋಕಿಯೋ ಒಲಂಪಿಕ್ಸ್: ಪುರುಷರ ಹಾಕಿಯಲ್ಲಿ ಜಪಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ; ಕ್ವಾರ್ಟರ್ ಫೈನಲ್ಗೆ ಎಂಟ್ರಿ

ಟೋಕಿಯೋ: ಜಿದ್ದಾಜಿದ್ದಿನಿಂದ ಕೂಡಿದ್ದ ಹಣಾಹಣಿಯಲ್ಲಿ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದ ಭಾರತದ ಪುರುಷರ ಹಾಕಿ ತಂಡ, ಟೋಕಿಯೋ ಒಲಂಪಿಕ್ಸ್ನ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಜಪಾನ್ ವಿರುದ್ಧ ಶುಕ್ರವಾರ “ಎ” ಗುಂಪಿನಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದ ಮೊದಲಾರ್ಧದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತದ ಆಟಗಾರರು, 13ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಚಾಣಾಕ್ಷ ಆಟವಾಡಿದ ಹರ್ಮನ್ಪ್ರೀತ್ ಸಿಂಗ್, ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ನೀಡಿದರು.

ಇದಾದ ಬಳಿಕ ಪಂದ್ಯದ 2ನೇ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್, ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆ ನೀಡಿದರು. ಆದರೆ ಈ ಹಂತದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡಿದ ಜಪಾನ್ ಪರ, ಕೆಂಟ ಥನಕಾ ಗೋಲು ಬಾರಿಸುವ ಮೂಲಕ ಗೋಲಿನ ಅಂತರ ಕಡಿಮೆ ಮಾಡಿದರು. ಪರಿಣಾಮ ದ್ವಿತಿಯಾರ್ಧದ ಅಂತ್ಯಕ್ಕೆ ಭಾರತ 2-1ರ ಮುನ್ನಡೆ ಸಾಧಿಸಿತು.

ಬಳಿಕ ಮತ್ತೊಮ್ಮೆ ಕಮ್ಬ್ಯಾಕ್ ಮಾಡಿದ ಜಪಾನ್ನ ಕೋಟಾ ವಟ್ನಬೆ ಪಂದ್ಯದ 3ನೇ ಕ್ವಾರ್ಟರ್ನ ಆರಂಭದಲ್ಲೇ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಲ್ಲಿ ನೆರವಾದರು. ಇದಾದ ಕೆಲವೇ ಹೊತ್ತಿನಲ್ಲೇ ತಿರುಗೇಟು ನೀಡಿದ ಭಾರತಕ್ಕೆ ನೆರವಾದ ಶಂಸೀರ್ ಸಿಂಗ್ ಗೋಲು ಗಳಿಸುವ ಮೂಲಕ ಭಾರತಕ್ಕೆ 3-2 ಅಂತರದ ಮುನ್ನಡೆ ತಂದುಕೊಟ್ಟರು. ನಂತರ ಪಂದ್ಯದ ನಾಲ್ಕನೇ ಕ್ವಾರ್ಟರ್ನಲ್ಲಿ ಪ್ರಾಬಲ್ಯ ಮೆರೆದ ಭಾರತದ ಪರ, ನೀಲಕಂಠ ಶರ್ಮ ಹಾಗೂ ಗುರ್ಜಂತ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವ ಮೂಲಕ ಭಾರತಕ್ಕೆ 5-3ರ ಮುನ್ನಡೆಯೊಂದಿಗೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಗ್ರೂಪ್ ಸ್ಟೇಜ್ನಲ್ಲಿ 13 ಪಾಯಿಂಟ್ಸ್ ಪಡೆದಿರುವ ಭಾರತ, ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.

Exit mobile version