ಟೋಕಿಯೋ ಒಲಂಪಿಕ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು: ಸೆಮೀಸ್ ಪ್ರವೇಶಿಸಿದ ಟೀಂ ಇಂಡಿಯಾ

ಟೋಕಿಯೋ, ಅ. 02: ಮಹತ್ವದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ, ಟೋಕಿಯೋ ಒಲಂಪಿಕ್ಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತದ ಪದಕದ ಕನಸು ಹೆಚ್ಚಾಗಿದೆ.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಎರಡೂ ತಂಡಗಳಿಗೂ ಗೆಲುವು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ ತಂಡದ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 1-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಪಂದ್ಯದ 22ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಿಂಚಿದ ಯುವ ಆಟಗಾರ್ತಿ ಗುರ್ಜಿತ್ ಕೌರ್, ತಮ್ಮ ಚೊಚ್ಚಲ ಒಲಂಪಿಕ್ಸ್ ಟೂರ್ನಿಯನ್ನು ಅವಿಸ್ಮರಣೀಯಗೊಳಿಸಿದರು.ಇದಾದ ಬಳಿಕ ಪರಿಣಾಮಕಾರಿ ಆಟವಾಡಿದ ಭಾರತ, ಪಂದ್ಯದ ಕೊನೆವರೆಗೂ ಆಸ್ಪ್ರೇಲಿಯಾ ತಂಡಕ್ಕೆ ಗೋಲುಗಳಿಸುವ ಅವಕಾಶವನ್ನೇ ಕೊಡಲಿಲ್ಲ.

ಈ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಎಂಟ್ರಿಕೊಟ್ಟಿರುವ ಭಾರತ ಮಹಿಳಾ ಹಾಕಿ ತಂಡ ಆ.4ರಂದು ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ಅರ್ಜೈಂಟಿನಾ ವಿರುದ್ಧ ಸೆಣೆಸಲಿದೆ. ವಿಶ್ವದ 2ನೇ ಶ್ರೇಯಾಂಕದ ತಂಡವಾಗಿರುವ ಅರ್ಜೈಂಟಿನಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ 3-0 ಅಂತರದಲ್ಲಿ ಸೋಲಿಸಿ, ಸೆಮೀಸ್ ಪ್ರವೇಶಿಸಿದೆ.

Exit mobile version