ಟೊಮೆಟೊ ಹಣ್ಣಿನಿಂದ ಕೆಸರುಗದ್ದೆಯಾದ ಚಿಂತಾಮಣಿ ಎಪಿಎಂಸಿ ಅವರಣ

ಚಿಂತಾಮಣಿ ಅ 11 : ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ(ಎಪಿಎಂಸಿ) ಟೊಮೆಟೊ ಮಾರಾಟದ ಪ್ರದೇಶವು ಟೊಮೆಟೊ ಹಣ್ಣುಗಳ ಕೆಸರುಗದ್ದೆಯಾಗಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಕಳೆದ 3 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುವುದು ದುಸ್ಸಾಹಾಸವಾಗಿದೆ. ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಲೋಡ್ ಟೊಮೆಟೊ ಮಾರಾಟಕ್ಕೆ ಬರುತ್ತದೆ. ಹರಾಜಿನ ನಂತರ ಹಣ್ಣನ್ನು ಮತ್ತೆ ಲಾರಿಗಳಿಗೆ ತುಂಬಿಕೊಂಡು ದೂರದ ರಾಜ್ಯಗಳಿಗೆ ರವಾನೆಯಾಗುತ್ತದೆ.
ಕಳಪೆ ಹಾಗೂ ಬೇಡದ ಹಣ್ಣುಗಳನ್ನು ಅಂಗಡಿಗಳ ಮುಂದೆ ಚರಂಡಿ,ರಸ್ತೆಯಲ್ಲಿ ಬಿಸಾಡುತ್ತಾರೆ.ಅದರ ಮೇಲೆ ವಾಹನಗಳು ಸಂಚರಿಸುತ್ತವೆ. ಜತೆಗೆ ಮಳೆ ಸುರಿಯುತ್ತಿರುವುದರಿಂದ ಕೊಚ್ಚೆಯಯಾಗಿ ಮಾರ್ಪಾಟಗಿದೆ.
ಥೇಟ್ ಕೆಸರು ಗದ್ದೆಯಾಗಿರುವ ಮಾರುಕಟ್ಟೆಯಲ್ಲಿ ಗಬ್ಬುನಾಥದ ದುರ್ವಾಸನೆ ಒಡೆಯುತ್ತದೆ. ವ್ಯಾಪಾರಿಗಳು,ರೈತರು, ಕೂಲಿಯಾಳುಗಳು, ಹಮಾಲಿಗಳು,ವಾಹನಗಳ ಚಾಲಕರು ಸಂಚರಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕದಲ್ಲಿ ಪರದಾಡುವಂತಾಗಿದೆ.
ಪ್ರತಿನಿತ್ಯ ವ್ಯರ್ಥವಾಗುವ ಹಣ್ಣುಗಳನ್ನು ಒಂದೆಡೆ ಶೇಖರಣೆ ಮಾಡುವ ವ್ಯವಸ್ಥೆ ಇಲ್ಲ.ರಸ್ತೆ, ಚರಂಡಿಗಳಲ್ಲಿ ಬಿಸಾಡುತ್ತಾರೆ. ದೊಡ್ಡ ದೊಡ್ಡ ಡಸ್ಟ್ ಬಿನ್ ಗಳನ್ನು ಇಟ್ಟು, ವ್ಯರ್ಥ ಹಣ್ಣುಗಳನ್ನು ರಸ್ತೆ, ಚರಂಡಿಗಳಿಗೆ ಹಾಕದೆ ಕಡ್ಡಾಯವಾಗಿ ಅವುಗಳಲ್ಲಿ ಹಾಕಬೇಕು.ಪ್ರತಿನಿತ್ಯ ಅವುಗಳನ್ನು ಹೊರಗಡೆ ಸಾಗಿಸುವ ವ್ಯವಸ್ಥೆ ಮಾಡಬೇಕು.ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ರೈತ ಮುಖಂಡ ಸೀಕಲ್ ರಮಣಾರೆಡ್ಡಿ ಸಲಹೆ ನೀಡಿದ್ದಾರೆ.

ಸ್ವಚ್ಛತೆಯ ಗುತ್ತಿಗೆ ಪಡೆದಿರುವವರು ಕಡ್ಡಾಯವಾಗಿ ಈ ಕೆಲಸ ಮಾಡುವಂತೆ ಆಡಳಿತವರ್ಗ ಮತ್ತು ಅಧಿಕಾರಿಗಳು ಮೇಲ್ವಿಚಾರಣೆ ವಹಿಸಬೇಕು.ಇದು ಹಲವಾರು ವರ್ಷಗಳಿಂದಲೂ ಎದುರಿಸುತ್ತಿರುವ ಸಮಸ್ಯೆಯಾಗಿದೆ.ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ. ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.  

Exit mobile version