ಉಳವಿ ರಸ್ತೆಯಲ್ಲಿ ಓಡಾಡಿದ್ರೆ ಉಳಿಗಾಲವಿಲ್ಲ ! ಕಂಗೆಟ್ಟ ಪ್ರಯಾಣಿಕರಿಂದ ಹಿಡಿಶಾಪ. ಉಳವಿಯಿಂದ ಕಾಳಿನದಿ ತೂಗು ಸೇತುವೆಗೆ ಇರುವ ರಸ್ತೆಗೆ ಕಾಯಕಲ್ಪ ಯಾವಾಗ?

ಉಳವಿ ರಸ್ತೆಯಲ್ಲಿ ಓಡಾಡಿದ್ರೆ ಉಳಿಗಾಲವಿಲ್ಲ ! ಕಂಗೆಟ್ಟ ಪ್ರಯಾಣಿಕರಿಂದ ಹಿಡಿಶಾಪ. Tourists were tortured! Bad

ಇದು ಉತ್ತರ ಕನ್ನಡ ಜಿಲ್ಲೆಯ ಸುಂದರ ಪ್ರಕೃತಿ. ಪಶ್ಚಿಮ ಘಟ್ಟ ಸಾಲಿನ ದಟ್ಟಾರಣ್ಯ, ನದಿ, ಜಲಪಾತ, ಕಡಲತೀರ ಇವೆಲ್ಲವೂ ಇಡೀ ಜಿಲ್ಲೆಯನ್ನು ಪ್ರವಾಸಿಗರ ಸ್ವರ್ಗವನ್ನಾಗಿಸಿದೆ.

ಇಂಥಾ ಸುಂದರ ಜಿಲ್ಲೆಯ ದಾಂಡೇಲಿ, ಜೋಯ್ಡಾ ಹಾಗೂ ಯಲ್ಲಾಪುರ ತಾಲ್ಲೂಕುಗಳ ವ್ಯಾಪ್ತಿಯ ಕಡಿದಾದ ಬೆಟ್ಟ ಗುಡ್ಡಗಳು, ದಟ್ಟ ಅರಣ್ಯದ  ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಶರಣರ ಸುಕ್ಷೇತ್ರ ಉಳವಿ ಇದೆ.

ಈ ಉಳವಿ ಕ್ಷೇತ್ರಕ್ಕೆ ಪ್ರಯಾಣ ಬೆಳೆಸುವಾಗ ಸಿಗುವ ಅನುಭವ ಅನನ್ಯ. ಬೆಟ್ಟ ಗುಡ್ಡಗಳ ದಟ್ಟ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಚಿಲಿ ಪಿಲಿ ಶಬ್ದದ ನಡುವೆ ಕಾಲ್ನಡಿಗೆ ಮೂಲಕ ಉಳವಿ ಗ್ರಾಮದಿಂದ ಕಾಳಿ ನದಿಗೆ ತೆರಳಬೇಕು.

ಈ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತೂಗು ಸೇತುವೆ ಪ್ರಯಾಣಿಕರ ಹಾಟ್‌ ಸ್ಪಾಟ್‌. ಈ ಸೇತುವೆಯಲ್ಲಿ ನಿಂತು ಕಾಳಿ ನದಿಯ ಸೌಂದರ್ಯ ಸವಿಯಬಹುದು. ಅಲ್ಲದೆ ನದಿಯ ಸುತ್ತಲೂ ಹರಡಿರುವ ಬೆಟ್ಟ ಗುಡ್ಡ  ಹಾಗೂ ಪ್ರಕೃತಿಯನ್ನು ಅಂದವನ್ನು ಕಂಡು ಆನಂದಿಸಬಹುದು.

ಆದ್ರೆ ಇಂಥಾ ಸುಂದರ ತಾಣಕ್ಕೆ ತಲುಪಬೇಕಾದ್ರೆ ಪ್ರವಾಸಿಗರು ಭಾರೀ ಪ್ರಯಾಸ ಪಡಬೇಕು. ಕಾರಣ ಇಲ್ಲಿಗೆ ಇರುವ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ.  ಹೆಬ್ಬಾಳ ಹಾಗೂ ಶಿವಪುರ ಗ್ರಾಮಗಳ ಮೂಲಕ ಕಾಳಿ ನದಿಯ ತೂಗು ಸೇತುವೆಗೆ ತೆರಳುವ  ಮುಖ್ಯ ರಸ್ತೆಯ ಅರ್ಧ ಭಾಗ ಸಂಪೂರ್ಣ ಹಾಳಾಗಿದೆ. ಇದು ಪ್ರವಾಸಿಗರಲ್ಲಿ ಭಾರೀ ಬೇಸರ ಮೂಡಿಸಿದೆ.

ವಿಪರ್ಯಾಸವೆಂದರೇ ಅದೆಷ್ಟೋ ಪ್ರವಾಸಿಗರು, ಭಕ್ತಾದಿಗಳು ಉಳವಿ ಕ್ಷೇತ್ರದ ದರ್ಶನಕ್ಕೆ ಬಂದು ಕಾಳಿ ನದಿಗೆ ಹೋಗುವ ಮುಖ್ಯ ರಸ್ತೆ ಸರಿಯಿಲ್ಲದ ಕಾರಣ ಹಿಡಿಶಾಪ ಹಾಕಿ ಹಿಂತಿರುಗಿ ಹೋಗಿದ್ದಾರೆ.

ಈ ಪ್ರದೇಶದ ಮುಖ್ಯ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಹಾಗೂ ನೆಟ್ ವರ್ಕ್ ಸಮಸ್ಯೆ ಮತ್ತು ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು  ಪದೇ ಪದೇ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಅವರ ಗಮನ ಸೆಳೆದ್ರೂ ಯಾವುದೇ ಪ್ರಗತಿ ಕಂಡಿಲ್ಲ. ಇದು ನಿಜವಾಗ್ಲೂ ದುರಂತ.

ಉಳವಿಯಿಂದ ಬಸವರಾಜು, ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Exit mobile version