ಗರ್ಭದಲ್ಲಿ ಅವಳಿ ಮಕ್ಕಳಿವೆ ಎಂದು ಸೂಚಿಸುವ ಆರಂಭಿಕ ಸೂಚನೆಗಳು

ಗರ್ಭಿಣಿಯಾಗುವುದು ಮಹಿಳೆಯ ಜೀವನದ ಅತ್ಯಂತ ಪ್ರಮುಖ ಹಂತ. ಈ ಪ್ರಕ್ರಿಯೆ ಪ್ರಾರಂಭವಾದ ತಕ್ಷಣ, ನಿಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸಲು ಪ್ರಾರಂಭಿಸಿ, ಹಲವಾರು ದೈಹಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಬದಲಾವಣೆಗಳೇ ಗರ್ಭಧಾರಣೆಯ ಮೊದಲ ಚಿಹ್ನೆಯಾಗಿರಬಹುದು. ಆದರೆ ಒಂದಕ್ಕಿಂತ ಹೆಚ್ಚು ಮಗು ಅಂದರೆ ಅವಳಿ ಅಥವಾ ತ್ರಿವಳಿ ಮಕ್ಕಳು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿದ್ದರೆ ಈ ಆರಂಭಿಕ ಲಕ್ಷಣಗಳು ಸ್ವಲ್ಪ ಭಿನ್ನವಾಗಿರುವುದು.

ಗರ್ಭಿಣಿಯಾದ ಕೆಲವು ವಾರಗಳಲ್ಲೇ ನೀವು ಅವಳಿ ಮಕ್ಕಳನ್ನು ಹೊಂದಿದ್ದೀರಿ ಎಂದು ಕೆಲವು ಆರಂಭಿಕ ಚಿಹ್ನೆಗಳು ತೋರಿಸಿಕೊಡುತ್ತವೆ. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ: 

ಬೆಳಿಗ್ಗಿನ ಕಾಯಿಲೆ( ಮಾರ್ನಿಂಗ್ ಸಿಕ್ ನೆಸ್):

ಕೆಲವು ಜನರು ಮಾರ್ನಿಂಗ್ ಸಿಕ್ ನೆಸ್ ನ್ನು ಏಕೆ ಅನುಭವಿಸುತ್ತಾರೆ ಎಂಬುದು ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ಅನೇಕ ಗರ್ಭಿಣಿಯರಿಗೆ, ಇದು ಗರ್ಭಧಾರಣೆಯ 4 ನೇ ವಾರದಲ್ಲಿಯೇ ಪ್ರಾರಂಭವಾಗಬಹುದು. ಗರ್ಭಧಾರಣೆಯ ಹಾರ್ಮೋನ್ ಹ್ಯೂಮನ್ ಕೊರಿಯೊನಿಕ್ ಗೊನಡೋಟ್ರೋಪಿನ್ (ಎಚ್‌ಜಿಹೆಚ್) ಹೆಚ್ಚಳವು ಯಾವುದೇ ಸಮಯದಲ್ಲಿ ವಾಕರಿಕೆ ಅನುಭವಿಸಲು ಕಾರಣವಾಗಿದೆ. ಮಾರ್ನಿಂಗ್ ಸಿಕ್ ನೆಸ್ ಕೇವಲ ಬೆಳಿಗ್ಗೆಯಷ್ಟೇ ಆಗುವುದಲ್ಲ. ಅವಳಿ ಮಕ್ಕಳನ್ನು ಹೊಂದಿರುವ ಗರ್ಭಿಣಿಯರು ಈ ಲಕ್ಷಣವನ್ನು ಹೆಚ್ಚು ಹೊಂದಿರುತ್ತಾರೆ. 14 ನೇ ವಾರ ದಾಟಿದ ಮೇಲೂ ವಾಕರಿಕೆ ಮತ್ತು ವಾಂತಿಯನ್ನು ಅನುಭವಿಸುತ್ತಿದ್ದೀರಿ ಎಂದರೆ ನಿಮ್ಮ ಹೊಟ್ಟೆಯೊಳಗೆ ಒಂದಕ್ಕಿಂತ ಹೆಚ್ಚು ಮಗು ಇರುವದನ್ನು ಸೂಚಿಸುವುದು.

ವಿಪರೀತ ಆಯಾಸ:

ಆಯಾಸವು ಗರ್ಭಧಾರಣೆಯ ಆರಂಭಿಕ ಚಿಹ್ನೆಯಾಗಿದೆ. ಪೀರಿಯಡ್ ಮಿಸ್ ಆದ ನಾಲ್ಕು ವಾರಗಳಲ್ಲಿ ನಿಮಗೆ ಆಯಾಸವಾಗಲು ಪ್ರಾರಂಭವಾಗಬಹುದು. ಹಾರ್ಮೋನ್ ಬದಲಾವಣೆ, ನಿದ್ರೆಯ ಅಡಚಣೆ ಮತ್ತು ಹೆಚ್ಚಿದ ಮೂತ್ರ ವಿಸರ್ಜನೆಯಂತಹ ಸಮಸ್ಯೆಗಳೊಂದಿಗೆ, ವಿಪರೀತ ಆಯಾಸವು ಸೇರಿಕೊಳ್ಳುವುದು. ಆದರೆ ಇದು ಖಚಿತವಾಗಿ ಅವಳಿ ಮಕ್ಕಳಿರುವುದರ ಸೂಚನೆ ಎಂದು ಹೇಳಾಗುವುದಿಲ್ಲ.

ಹೆಚ್ಚಿನ ಎಚ್‌ಸಿಜಿ:

ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್ (ಎಚ್‌ಸಿಜಿ) ಗರ್ಭಾವಸ್ಥೆಯಲ್ಲಿ ದೇಹದಿಂದ ಉತ್ಪತ್ತಿಯಾಗುವ ಹಾರ್ಮೋನ್. ಮನೆಯಲ್ಲಿಯೇ ಗರ್ಭಧಾರಣೆಯ ಪರೀಕ್ಷೆ ಮಾಡುವಾಗ, ಮೂತ್ರದಲ್ಲಿ ಈ ಹಾರ್ಮೋನ್ ಪತ್ತೆಯಾದರೆ, ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ. ಈ ಹಾರ್ಮೋನಿನ ಮಟ್ಟವನ್ನು ಮನೆ ಪರೀಕ್ಷೆಯಿಂದ ತಿಳಿದುಕೊಳ್ಳಲಾಗದಿದ್ದರೂ, ರಕ್ತ ಪರೀಕ್ಷೆಗಳಿಂದ ಸಾಧ್ಯ. ನೀವು ಈ ಪರೀಕ್ಷೆ ಮಾಡಿಸಿದಾಗ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ಅಥವಾ ಆ ಸಂಖ್ಯೆ ದುಪ್ಪಟ್ಟಾಗಿದ್ದರೆ, ಅದು ಅವಳಿ ಮಕ್ಕಳಿರುವುದನ್ನು ಸೂಚಿಸುವುದು.

ಎರಡು ಹೃದಯ ಬಡಿತ:

ಭ್ರೂಣದ ಡಾಪ್ಲರ್ ಬಳಸಿ ನಿಮ್ಮ ಮಗುವಿನ ಹೃದಯ ಬಡಿತವನ್ನು 8 ರಿಂದ 10 ವಾರಗಳ ನಂತರ ಕೇಳಬಹುದು. ಹೀಗೆ ಕೇಳುವಾಗ ನಿಮ್ಮ ವೈದ್ಯರಿಗೆ ಎರಡು ಹೃದಯ ಕೇಳಿಸಿದರೆ, ಅವಳಿಯನ್ನು ಖಚಿತಪಡಿಸಲು, ಹೊಟ್ಟೆಯೊಳಗೆ ಏನಾಗುತ್ತಿದೆ ಎಂಬುದರ ಕುರಿತು ಉತ್ತಮ ಚಿತ್ರವನ್ನು ಪಡೆಯಲು ಅಲ್ಟ್ರಾಸೌಂಡ್ ಅನ್ನು ಮಾಡಿಸಲು ಸೂಚಿಸುತ್ತಾರೆ.

ಮಗುವಿನ ಚಲನೆ:

ಹೆಚ್ಚಿನ ಪೋಷಕರು ಸುಮಾರು 18 ವಾರಗಳವರೆಗೆ ಮಗುವಿನ ಚಲನೆಯ ಭಾವನೆಯನ್ನು ಪಡೆಯುವುದಿಲ್ಲ. ಆದರೆ ನಿಮ್ಮ ಮಗು ಮೊದಲಿನಿಂದಲೂ ಚಲಿಸುತ್ತಿರುತ್ತದೆ, ಅದು ನಿಮ್ಮ ಅರಿವಿಗೆ ಬರುವುದು ಎರಡನೇ ತ್ರೈಮಾಸಿಕದ ಬಳಿಕವಷ್ಟೇ. ಎರಡು ಅಥವಾ ಹೆಚ್ಚಿನ ಶಿಶುಗಳನ್ನು ಹೊಂದಿರುವವರು ಸ್ವಲ್ಪ ಮುಂಚಿತವಾಗಿ ಚಲನೆಯನ್ನು ಅನುಭವಿಸುವಿರಿ. ಆದರೆ ಇದು ನಿಮ್ಮ ಎರಡನೇ ತ್ರೈಮಾಸಿಕದ ಮೊದಲು ಸಂಭವಿಸುವ ಸಾಧ್ಯತೆಯಿಲ್ಲ .

ತೂಕ ಹೆಚ್ಚಾಗುವಿಕೆ:

ಗರ್ಭಧಾರಣೆ ಪ್ರಾರಂಭವಾದ ಬಳಿಕ ಸಾಮಾನ್ಯವಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ. ಆದರೆ ಮೊದಲ ಮೂರು ತಿಂಗಳು ತೂಕ ಹೆಚ್ಚಾಗುವ ಸಾಧ್ಯತೆ ತುಂಬಾ ಕಡಿಮೆ. ಎರಡನೇ ತ್ರೈಮಾಸಿಕದಲ್ಲಿ ತೂಕ ಹೆಚ್ಚಾಗಲು ಆರಂಭವಾಗುತ್ತದೆ. ಹೆಚ್ಚು ವೇಗವಾಗಿ ಸಂಭವಿಸುತ್ತದೆ. ಒಮದು ವೇಳೆ ಮೊದಲ ತ್ರೈ ಮಾಸಿಕದಲ್ಲಿ ತೂಕ ಹೆಚ್ಚಾಗಲು ಪ್ರಾರಂಭವಾದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್:

ಮೇಲಿನ ಅಂಶಗಳು ಅವಳಿ ಗರ್ಭಧಾರಣೆಯ ಚಿಹ್ನೆಗಳಾಗಿದ್ದರೂ, ನಿಮ್ಮ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಗು ಇದೆಯೇ ಎಂದು ತಿಳಿಯುವ ಏಕೈಕ ಮಾರ್ಗವೆಂದರೆ ಅಲ್ಟ್ರಾಸೌಂಡ್. ಕೆಲವು ವೈದ್ಯರು ಗರ್ಭಧಾರಣೆಯನ್ನು ದೃಢೀಕರಿಸಲು ಅಥವಾ ಸಮಸ್ಯೆಗಳನ್ನು ಪರೀಕ್ಷಿಸಲು 6 ರಿಂದ 10 ವಾರಗಳ ನಂತರ ಆರಂಭಿಕ ಸ್ಕ್ಯಾನ್ ಮಾಡಿಸುತ್ತಾರೆ. ವೈದ್ಯರು ಒಮ್ಮೆ ಸೋನೋಗ್ರಾಮ್ ಚಿತ್ರಗಳನ್ನು ನೋಡಲು ಸಾಧ್ಯವಾದರೆ , ನೀವು ಎಷ್ಟು ಮಕ್ಕಳನ್ನು ಹೊತ್ತಿದ್ದೀರಿ ಎಂದು ನಿಮಗೆ ತಿಳಿಯುತ್ತದೆ.

Exit mobile version