ಅಕ್ರಮವಾಗಿ ಸಚಿವ ಅಶ್ವತ್ಥ್ ನಾರಾಯಣ್ ಕೆಜಿಎಫ್-2ನಲ್ಲಿ ಹೂಡಿಕೆ ಮಾಡಿದ್ದಾರೆ : ಉಗ್ರಪ್ಪ!

ugrappa

ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಅಶ್ವತ್ಥ್ ನಾರಾಯಣ್(Dr. Ashwath Narayan) ಅವರು ಅಕ್ರಮವಾಗಿ ಕಪ್ಪು ಹಣವನ್ನು(Black Money) ಕಾನೂನು(Law) ಬದ್ದಗೊಳಿಸಲು ಇತ್ತೀಚೆಗೆ ತೆರೆಕಂಡ ಕೆಜಿಎಫ್-2(KGF 2) ಚಿತ್ರದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್(Congress) ಮುಖಂಡ ವಿ.ಎಸ್ ಉಗ್ರಪ್ಪ(VS Ugrappa) ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಶ್ವತ್ಥ್ ನಾರಾಯಣ್ ಬಳಿ ಇರುವ ಬೇನಾಮಿ ಆಸ್ತಿಯನ್ನು ಕಾನೂನು ಬದ್ದಗೊಳಿಸಲು ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ. ಈಗಾಗಲೇ ನಾನು ಮಾದ್ಯಮಗಳಲ್ಲಿ ಗಮನಿಸಿದಂತೆ ಕೆಜಿಎಫ್-2 ಸಿನಿಮಾ ವಿಶ್ವಾದ್ಯಂತ ಸುಮಾರು 1000 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಸಿನಿಮಾವೊಂದು ಸಾವಿರ ಕೋಟಿ ರೂ. ಗಳಿಸಿತೋ? ಅಥವಾ ಬೇನಾಮಿ ಆಸ್ತಿ ಸಾವಿರ ಕೋಟಿ ಮಾಡಲು ನಿರ್ಮಾಪಕರಾದರೊ ಈ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇನ್ನು ಅಶ್ವತ್ಥ್ ನಾರಾಯಣ್ ಎಸಗಿರುವ ಭ್ರಷ್ಟಾಚಾರಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆ. ನಮ್ಮ ಪಕ್ಷವು ಸಿದ್ದವಿದೆ. ವಿಧಾನಸೌಧದ ಪೂರ್ವ ಬಾಗಿಲಿನ ಮೆಟ್ಟಿಲುಗಳ ಮೇಲೆ ಚರ್ಚೆ ನಡೆಯಲಿ. ಸಾರ್ವಜನಿಕವಾಗಿ ಮುಕ್ತ ಚರ್ಚೆ ನಡೆಯಲಿ. ಅಶ್ವತ್ಥ್ ನಾರಾಯಣ್ ನನ್ನ ಈ ಸವಾಲು ಸ್ವೀಕರಿಸಲಿ ಎಂದು ಆಹ್ವಾನ ನೀಡಿದರು.
ನಮ್ಮ ಕಾಂಗ್ರೆಸ್ ಪಕ್ಷ ಎಷ್ಟು ಭ್ರಷ್ಟಾಚಾರ ಮಾಡಿದೆ? ಬಿಜೆಪಿ ಅವಧಿಯಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಮತ್ತು ನಡೆಯುತ್ತಿದೆ ಎಂಬುದರ ಕುರಿತು ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆ.

ಯಾವ ದಿನ, ಯಾವ ಸ್ಥಳ, ಯಾವ ಸಮಯ ಎಂಬುದನ್ನು ಅಶ್ವತ್ಥ್ ನಾರಾಯಣ್ ಅವರೇ ನಿಗದಿಪಡಿಸಲಿ. ಇನ್ನು ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ. ಆದರೆ ಬಿಜೆಪಿ ಅಧಿಕಾರ ಹಿಡಿದು ಲೂಟಿ ಮಾಡುತ್ತಿದೆ. ಯಾರೂ ಎಷ್ಟು ಲೂಟಿ ಮಾಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದರು.
ಇನ್ನು ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿಯೂ ಅಶ್ವತ್ಥ್ ನಾರಾಯಣ್ ಸಹೋದರನ ಕೈವಾಡವಿದೆ ಎನ್ನಲಾಗುತ್ತಿದೆ.

ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಅಕ್ರಮವಾಗಿ ನೇಮಕವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

Exit mobile version