ಹೈದರಾಬಾದ್, ಏ. 14: ತೆಲಂಗಾಣದ ಹಲವೆಡೆ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದೆ. ನಿಜಾಮಬಾದ, ಕರೀಮನಗರ, ವರಂಗಲ್, ನಿರ್ಮಲ್ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಅಪಾರ ಪ್ರಮಾಣದ ಮಾವು ಮತ್ತು ಭತ್ತ ನಾಶವಾಗಿದೆ.
ಕರ್ನಾಟಕದಲ್ಲೂ ಏಪ್ರಿಲ್ 13ರಿಂದ ಏಪ್ರಿಲ್ 15ರ ವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು (ಏಪ್ರಿಲ್ 14) ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಅತಿ ಹೆಚ್ಚೆಂದರೆ 34 ಡಿಗ್ರಿ ತಾಪಮಾನ ದಾಖಲಾಗಬಹುದು, ಅತಿ ಕಡಿಮೆಯೆಂದರೆ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ರಾಜ್ಯದ ರಾಜಧಾನಿಯಲ್ಲಿ ಇಂದು ಬೆಳಿಗ್ಗೆಯಿಂದ ಮೋಡ ಆವರಿಸಿದೆ. ಮಳೆಯಾಗುವ ಸಾಧ್ಯತೆಯೂ ಹೆಚ್ಚಿದೆ.