ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ !

bjp

  ಲಕ್ನೋ ಜ 03: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಈಗಿನಿಂದಲೇ ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ. ರಾಜಕೀಯವಾಗಿ ಎಲ್ಲಾ ಪಕ್ಷಗಳಿಗೂ ನಿರ್ಣಾಯಕವಾಗಿರುವ ಉತ್ತರಪ್ರದೇಶದಲ್ಲಿ ಈ ಬಾರಿ ಮತ್ತೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಟೈಮ್ಸ್ ನೌ-ನವಭಾರತ್‌ಗಾಗಿ ವಿಟೋ ನಡೆಸಿದ ಹೊಸ ಸಮೀಕ್ಷೆಯು, ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂಬುದಾಗಿ ತಿಳಿಸಿದೆ. ಬಿಜೆಪಿ ಮೈತ್ರಿಕೂಟ 403 ಸದಸ್ಯ ಬಲದ ವಿಧಾನಸಭೆಯಲ್ಲಿ 230-249 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯು ನುಡಿದ ಭವಿಷ್ಯದಂತೆ ಒಂದು ವೇಳೆ ಯೋಗಿ ಆದಿತ್ಯನಾಥ್ ಅವರ ಸರಕಾರ ಅಧಿಕಾರಕ್ಕೆ ಬಂದರೆ 1985ರ ಬಳಿಕ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೊದಲ ಯುಪಿ ಮುಖ್ಯಮಂತ್ರಿ ಎಂಬ ಕೀರ್ತಿಗೆ ಯೋಗಿ ಪಾತ್ರರಾಗಲಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ನೇತೃತ್ವದ ಮೈತ್ರಿ ಕೂಟ 137-152 ಸ್ಥಾನಗಳನ್ನು ಪಡೆಯಲಿದೆ. ಬಹುಜನ ಸಮಾಜವಾದಿ ಪಕ್ಷ 9-14 ಸ್ಥಾನಗಳನ್ನು ಪಡೆಯಲಿದೆ, ಕಾಂಗ್ರೆಸ್ ಕೇವಲ ನಾಲ್ಕರಿಂದ ಏಳು ಸ್ಥಾನಗಳನ್ನು ಗೆಲ್ಲಲು ಮಾತ್ರ ಶಕ್ತವಾಗಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

Exit mobile version