ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ಡೆಹ್ರಾಡೂನ್, ಮಾ. 09: ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿರುವ ರಾವತ್, ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರಿಗೆ ಕೆಲ ಸಮಯದ ಮೊದಲು ರಾಜೀನಾಮೆ ಪತ್ರ ಹಸ್ತಾಂತರಿಸಿದರು. ಉತ್ತರಾಖಂಡದಲ್ಲಿ ಮುಂದಿನ ವರ್ಷ ಫೆಬ್ರುವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾವತ್ ಉತ್ತರಾಧಿಕಾರಿಯನ್ನು ಬಿಜೆಪಿ ಇನ್ನೂ ಘೋಷಿಸಿಲ್ಲ.

ತಮ್ಮದೇ ಪಕ್ಷದ ಶಾಸಕರಿಂದ ಅವರು ‘ಅಸಮರ್ಥ ಮುಖ್ಯಮಂತ್ರಿ’ (below average) ಎನಿಸಿಕೊಂಡಿದ್ದರು. ಇವರು ಮುಖ್ಯಮಂತ್ರಿಯಾಗಿ ಮುಂದುವರಿದರೆ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ಮಾಡಬಹುದು ಎಂಬ ಆತಂಕ ಶಾಸಕರಿಂದ ವ್ಯಕ್ತವಾಗಿತ್ತು.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ತ್ರಿವೇಂದ್ರ ಸಿಂಗ್, ಉತ್ತರಾಖಂಡ ರಾಜಕಾರಣದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ರಾವತ್ ಅವರ ಸ್ಥಾನ ತುಂಬಲಿರುವ ವ್ಯಕ್ತಿಯ ಬಗ್ಗೆಯೂ ಚರ್ಚೆ ನಡೆಯಿತು. ಉತ್ತರಾಖಂಡ ಸಂಪುಟದಲ್ಲಿ ಸಚಿವರಾಗಿರುವ ಧನ್ ಸಿಂಗ್ ರಾವತ್ ಮತ್ತು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ರಾವತ್ ನಾಯಕತ್ವ ಮುಂದುವರಿದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಬಹುತೇಕ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವಲ್ಲಿ ರಾವತ್ ವಿಫಲರಾಗಿದ್ದಾರೆ ಎಂದು ಶಾಸಕರು ಆರೋಪಿಸಿದ್ದರು.

Exit mobile version