ಉತ್ತರಾಖಂಡ : ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್​ ಸಿಂಗ್​ ದಾಮಿ ಆಯ್ಕೆ

ಉತ್ತರಾಖಂಡ, ಜು. 03: ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್​ ಸಿಂಗ್​ ದಾಮಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾವತ್​ ನಿನ್ನೆ ರಾತ್ರಿ ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಇಂದು ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಡೆಹ್ರಾಡೂನ್​​ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ 57 ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಪುಷ್ಕರ್ ಸಿಂಗ್​ ಧಮಿಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಯಾರು ಈ ಪುಷ್ಕರ್ ಸಿಂಗ್ ಧಮಿ?
ಉತ್ತರಾಖಂಡದ 10ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪುಷ್ಕರ್​ ಸಿಂಗ್​ ಧಮಿಯವರಿಗೆ 45 ವರ್ಷ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಆಪ್ತರಾಗಿರುವ ಪುಷ್ಕರ್​ ಸಿಂಗ್​​ರನ್ನು ಮುಖ್ಯಮಂತ್ರಿಯನ್ನಾಗಿ ಇಂದು ಬಿಜೆಪಿಗರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಖತಿಮಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ. ಹಾಗೇ, ಭಗತ್​ ಸಿಂಗ್ ಕೊಶಿಯಾರಿ ಮುಖ್ಯಮಂತ್ರಿ(2001-2002ರವರೆಗೆ)ಯಾಗಿದ್ದಾಗ ಇವರು ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Exit mobile version