ವಿಧಾನಸಭಾ ಚುನಾವಣಾ ಹಿನ್ನಲೆ: ೩ರಾಜ್ಯಗಳಲ್ಲಿ ಇಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರ

ಪಾಲಕ್ಕಾಡ್: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದು, ಈಗಾಗಲೇ ಮೋದಿಯವರು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರ‍್ಯಾಲಿ ಆರಂಭಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕೆಲವು ಬೆಳ್ಳಿ ತುಂಡುಗಳಿಗಾಗಿ ಜೂಡಸ್ ಯೇಸು ಕ್ರಿಸ್ತನನ್ನು ಮೋಸ ಮಾಡಿದ್ದನು. ಅದೇ ರೀತಿ ಚಿನ್ನದ ಕೆಲವೇ ತುಂಡುಗಳಿಗಾಗಿ ಎಲ್​ಡಿಎಫ್ ಕೇರಳದ ಜನರಿಗೆ ಮೋಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮೆಟ್ರೊಮ್ಯಾನ್ ಇ.ಶ್ರೀಧರನ್ ಪರವಾಗಿ ಮೋದಿ ಇಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಇ.ಶ್ರೀಧರನ್ ಅವರನ್ನು ಸನ್ಮಾನಿಸಿ ಮಾತನಾಡಿದ ಮೋದಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸಿ. ಕೇರಳದ ಪ್ರಸ್ತುತ ಪರಿಸ್ಥಿತಿಯಿಂದ ಭಿನ್ನವಾದ ಕನಸುಗಳನ್ನು ಹೊತ್ತು ನಾನು ಬಂದಿದ್ದೇನೆ ಎಂದಿದ್ದಾರೆ

ಕೇರಳದ 140 ಚುನಾವಣಾ ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಹೆಚ್ಚಿನ ಸೀಟು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ.

ಮಧ್ಯಾಹ್ನ ತಮಿಳುನಾಡಿನಲ್ಲಿ ಪ್ರಚಾರ ಕೇರಳಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ತಮಿಳುನಾಡಿನ ಧಾರಾಪುರಂನಲ್ಲಿ ಮಧ್ಯಾಹ್ನ 12.50ಕ್ಕೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರು ಧಾರಾಪುರಂ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಫೆಬ್ರವರಿ 25ರಂದು ಮೋದಿ ಈ ಚುನಾವಣಾ ಕ್ಷೇತದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ತಮಿಳುನಾಡಿನ ಆಡಳಿತಾರೂಢ ಪಕ್ಷ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮೈತ್ರಿ ಪಕ್ಷವಾಗಿ ಬಿಜೆಪಿ ಇಲ್ಲಿ ಕಣಕ್ಕಿಳಿದಿದೆ.

ಸಂಜೆ ಪುದುಚೇರಿಯಲ್ಲಿ ಮೋದಿ ಚುನಾವಣಾ ಪ್ರಚಾರ
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಸಂಜೆ 4.35ಕ್ಕೆ ಮೋದಿ ಪುದುಚೇರಿಯಲ್ಲಿ ಎನ್​ಡಿಎ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪುದುಚೇರಿಯಲ್ಲಿ ಎಐಎನ್​ಆರ್​ಸಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 30 ಚುನಾವಣಾ ಕ್ಷೇತ್ರಗಳ ಪೈಕಿ 16ರಲ್ಲಿ ಸ್ಪರ್ಧಿಸುತ್ತಿದೆ. ಎಐಎನ್​ಆರ್​ಸಿ ನಾಯಕ, ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಥಟ್ಟನ್​ಚವಡಿ ಮತ್ತು ಯಾನಂನಿಂದ ಕಣಕ್ಕಿಳಿದಿದ್ದಾರೆ.

ಟ್ವಿಟರ್​ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್
ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡುವುದನ್ನು ವಿರೋಧಿಸಿ ತಮಿಳುನಾಡಿನ ನೆಟ್ಟಿಗರು ಟ್ವಿಟರ್​ನಲ್ಲಿ #GoBackModi ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

Exit mobile version