ಅಜ್ಜಿಗೆ ಮನೆ ಭಾಗ್ಯ, ವಿಜಯಟೈಮ್ಸ್‌ ಇಂಪ್ಯಾಕ್ಟ್‌. ಮೈಸೂರು ಲಯನ್ಸ್‌ ಕ್ಲಬ್‌ನಿಂದ ಆದಿವಾಸಿ ಅಜ್ಜಿಗೆ ಮನೆ ಭಾಗ್ಯ. ನೇರಳಕುಪ್ಪೆ ಹಾಡಿಯಲ್ಲಿ ಲಯನ್‌ ಸುಬ್ರಮಣ್ಯ ತಂಡದಿಂದ ಮನೆ ನಿರ್ಮಾಣ

ಅಜ್ಜಿಗೆ ಮನೆ ಭಾಗ್ಯ, ವಿಜಯಟೈಮ್ಸ್‌ ಇಂಪ್ಯಾಕ್ಟ್‌. ಮೈಸೂರು ಲಯನ್ಸ್‌ ಕ್ಲಬ್‌ನಿಂದ

ಇದು ಮೈಸೂರು ಜಿಲ್ಲೆಯ ನೇರಳಕುಪ್ಪೆ ಹಾಡಿಯ ಆದಿವಾಸಿ ಮನೆಗಳ ದುಸ್ಥಿತಿಯ ಬಗ್ಗೆ ವಿಜಯಟೈಮ್ಸ್‌ ಮಾಡಿದ ವರದಿ. ಇಲ್ಲಿನ ಆದಿವಾಸಿಗಳು ಪಡುತ್ತಿರುವ ಕಷ್ಟ, ಸರ್ಕಾರದಿಂದ ಅವರಿಗಾಗಿರುವ ಅನ್ಯಾಯ, ಕಳಪೆ ಕಾಮಗಾರಿಯ ಕುರಿತು ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ವರದಿ ಮಾಡಿ ಸರ್ಕಾರದ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

ಆದ್ರೆ ಆದಿವಾಸಿಗಳ ಕಲ್ಯಾಣದ ಬಗ್ಗೆ ಯೋಚಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನವೇ ಹರಿಸಿಲ್ಲ. ನಾವು ಎರಡನೇ ಬಾರಿ ಭೇಟಿ ಮಾಡಿದಾಗಲೂ ಆ ಮನೆಗಳ ಪರಿಸ್ಥಿತಿ ಹಾಗೆಯೇ ಇತ್ತು.

ಮನೆಯ ಗೋಡೆ ಕುಸಿದು ಬೀಳೋ ಹಂತದಲ್ಲಿತ್ತು. ಈ ಮಳೆಗಾಲದಲ್ಲಿ ಗೋಡೆ ಕುಸಿದು, ಪ್ರಾಣಾಪಾಯದ ಆತಂಕವೂ ಇತ್ತು. ಈ ಬಗ್ಗೆ ಮತ್ತೆ ವರದಿ ಮಾಡಿದೆವು. ನಮ್ಮ ವರದಿ ನೋಡಿದ ಮೈಸೂರಿನ ಲಯನ್ಸ್‌ ಕ್ಲಬ್ ಸದಸ್ಯ ಹಾಗೂ ಕಟ್ಟಡ ನಿರ್ಮಾಣಕಾರ ಲಯನ್‌ ಸುಬ್ರಮಣ್ಯ ಅವರು ನೇರಳಕುಪ್ಪೆ ಹಾಡಿಗೆ ಭೇಟಿ ಕೊಟ್ರು. ಅಲ್ಲಿನ ಮನೆಗಳ ದುಸ್ಥತಿಯನ್ನು ಕಣ್ಣಾರೆ ಕಂಡ್ರು.

ಕುಸಿಯುವ ಹಂತದಲ್ಲಿರುವ ಮನೆಯನ್ನು ತಕ್ಷಣ ಮರು ನಿರ್ಮಿಸಿ ಕೊಡುವ ನಿರ್ಧಾರ ಮಾಡಿದ್ರು. ಮನೆ ಛಾವಣಿ ಮಾತ್ರ ಕುಸಿದಿರಲಿಲ್ಲ, ಬದಲಾಗಿ ಗೋಡೆ ಕೂಡ ಬಿರುಕು ಬಿದ್ದಿತ್ತು. ಹಾಗಾಗಿ ಈ ಮನೆಯನ್ನು ಹೊಸದಾಗಿಯೇ ಕಟ್ಟುವ ನಿರ್ಧಾರವನ್ನು ಸುಬ್ರಮಣ್ಯ ಅವರು ಮಾಡಿದ್ರು. ಸುಬ್ರಮಣ್ಯ ಅವರ ನಿರ್ಧಾರಕ್ಕೆ ಅವರ ಶ್ರೀಮತಿಯವರೂ ಸಾಥ್‌ ನೀಡಿದ್ರು.

ಮಳೆಯನ್ನೂ ಲೆಕ್ಕಿಸದೆ ಕೆಲಸ ಪ್ರಾರಂಭಿಸಿದ ಸುಬ್ರಮಣ್ಯ ಅವರ ತಂಡ ಹಂತ ಹಂತವಾಗಿ ಮನೆ ನಿರ್ಮಾಣ ಮಾಡಿತು. ಕಳೆದ ವಾರವಷ್ಟೇ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಮನೆಯನ್ನು ಆದಿವಾಸಿ ಅಜ್ಜಿಗೆ ಹಸ್ತಾಂತರಿಸಲಾಯಿತು.

ಸರ್ಕಾರ ಮಾಡಲಾಗದ ಕೆಲಸವನ್ನು ಲಯನ್ ಸುಬ್ರಮಣ್ಯ ಅವರ ತಂಡ ಮಾಡಿ ತೋರಿಸಿತು. ನಿಜವಾಗ್ಲೂ ಇವರ ಕೆಲಸ ಶ್ಲಾಘನೀಯ. ಇದು ವಿಜಯಟೈಮ್ಸ್ ವರದಿಗೆ ಸಿಕ್ಕ ಫಲ.

ನೇರಳಕುಪ್ಪ ಮಾತ್ರವಲ್ಲ ಮೈಸೂರಿನ ಹೆಚ್‌,ಡಿ ಕೋಟೆ ಹಾಗೂ ಹುಣಸೂರು ತಾಲ್ಲೂಕಿನಲ್ಲಿ ಆದಿವಾಸಿಗಳಿಗೆ ಸರ್ಕಾರ ಕೊಟ್ಟಿರುವ ಹೆಚ್ಚಿನ ಮನೆಗಳು ಕುಸಿಯುವ ಹಂತದಲ್ಲಿವೆ. ಸರ್ಕಾರ ಎಚ್ಚೆತ್ತುಕೊಂಡು ಈ ಮನೆಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಬೇಕು ಅನ್ನೋದು ವಿಜಯಟೈಮ್ಸ್‌ ಆಗ್ರಹ

ಬ್ಯುರೋ ರಿಪೋರ್ಟ್‌, ವಿಜಯಟೈಮ್ಸ್‌

Exit mobile version