ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ನಾಳೆ ಅಧಿಕೃತ ಚಾಲನೆ

ಬಳ್ಳಾರಿ ಅ 1 : ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ವಿಜಯನಗರ ಜಿಲ್ಲೆಯ ಉದ್ಘಾಟನೆ ಮಾಡಲಿದ್ದು, ವಿಜಯನಗರ ಜಿಲ್ಲೆಗೆ ಹೊಸ ಸಿಇಓ ಆಗಿ ಕೆ.ಎಂ.ಗಾಯತ್ರಿ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಈ ಮೂಲಕ ವಿಜಯನಗರ ಜಿಲ್ಲಾ ಪಂಚಾಯತ್​ಗೆ ಮೊದಲ ಸಿಇಓ ಆಗಿ ಮಹಿಳಾ ಅಧಿಕಾರಿಯನ್ನು ರಾಜ್ಯ ಸರ್ಕಾರ ನೇಮಿಸಲಾಗಿದೆ.

ಸೆಪ್ಟೆಂಬರ್ 30ರಂದು ಗುರುವಾರ ಕರ್ನಾಟಕ ಸರ್ಕಾರ ಹೊಸ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ ಮತ್ತು ಎಸ್​ಪಿ ನೇಮಕ ಮಾಡಿ ಆದೇಶ ಪ್ರಕಟಿಸಿತ್ತು. ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ಜಿಲ್ಲಾಧಿಕಾರಿಯಾಗಿ ಮತ್ತು ಎಸ್​ಪಿಯಾಗಿ ಡಾ. ಅರುಣ್​. ಕೆ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ಫೆ.8ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ನೂತನ ವಿಜಯನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ಆಗಿರಲಿದೆ. ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕುಗಳು ಇರಲಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ಘೋಷಿಸಿದೆ. ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ನೂತನ ಜಿಲ್ಲೆಯ ಭಾಗವಾಗಲಿವೆ.

ಇಷ್ಟು ದಿನ ಈ ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದವು. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲ್ಲೂಕುಗಳು ಮಾತ್ರ ಉಳಿಯುತ್ತವೆ.

Exit mobile version