ವಿಜಯನಗರ ರಚನೆಗೆ ವಿರೋಧ: ನವೆಂಬರ್‌ 26ಕ್ಕೆ ಬಳ್ಳಾರಿ ಬಂದ್

ಬಳ್ಳಾರಿ, ನ. 19: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವ ಆನಂದ್ ಸಿಂಗ್ ಗೆ ನೀಡಿದ ಭರವಸೆಯಂತೆ, ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಘೋಷಣೆ ಮಾಡಿದ್ದರು. ಇಂತಹ ನೂತನ ಜಿಲ್ಲೆಯಾಗಿ ವಿಜಯನಗರ ರಚನೆ ಮಾಡಿದ್ದನ್ನು ವಿರೋಧಿಸಿ, ನವೆಂಬರ್ 26ರಂದು ಬಳ್ಳಾರಿ ಬಂದ್ ಗೆ ಕರೆ ನೀಡಲಾಗಿದೆ.

ರಾಜ್ಯದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ, ಸಿಎಂ ಯಡಿಯೂರಪ್ಪ ಅವರು ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಅಧಿಕೃತಗೊಳಿಸುವುದಾಗಿ ತಿಳಿಸಿದ್ದರು. ಇಂತಹ ನೂತನ ಜಿಲ್ಲೆಯಾಗಿ ವಿಜಯನಗರ ಘೋಷಣೆ ಮಾಡಿದ್ದಕ್ಕೆ ಸಚಿವ ಆನಂದ್ ಸಿಂಗ್ ಕೂಡ ಹರ್ಷ ವ್ಯಕ್ತ ಪಡಿಸಿದ್ದರು.

ಆದರಿದೀಗ ವಿರೋಧ ಕೂಡ ವ್ಯಕ್ತ ವಾಗಿದೆ. ನೂತನ ಜಿಲ್ಲೆಯಾಗಿ ವಿಜಯನಗರ ಘೋಷಿಸಿದ್ದಕ್ಕೆ ಬಳ್ಳಾರಿ ಹೋರಾಟ ಸಮಿತಿ ವಿರೋಧ ವ್ಯಕ್ತ ಪಡಿಸಿದೆ. ಅಲ್ಲದೇ ಬಳ್ಳಾರಿ ಹೋರಾಟ ಸಮಿತಿಯು ವಿಜಯನಗರ ಜಿಲ್ಲೆ ವಿರೋಧಿಸಿ ನವೆಂಬರ್ 26ಕ್ಕೆ ಬಂದ್ ಗೆ ಕರೆ ನೀಡಿದೆ. ಈ ಮೂಲಕ ನೂತನ ಜಿಲ್ಲೆಯಾಗಿ ವಿಜಯನಗರ ಘೋಷಣೆ ಮಾಡಿದ್ದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದೆ.

ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಬಳ್ಳಾರಿಯನ್ನೇ ವಿಜಯ ನಗರ ಜಿಲ್ಲೆಗೆ ಸೇರಿಸಿ, ಬಳ್ಳಾರಿ ಜಿಲ್ಲೆ ವಿಭಜನೆ ಮಾಡಲು ಹೊರಟಿರುವ ಸರ್ಕಾರದ ನಿಲುವು ನೋವು ತಂದಿದೆ ಎಂದಿದ್ದಾರೆ.

ವಿಶ್ವ ಮಾನ್ಯತೆ ಪಡೆದಿರುವ ಹಂಪಿ, ತುಂಗಭದ್ರಾ ಡ್ಯಾಮ ಇಲ್ಲದ ಜಿಲ್ಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಖಂಡ ಜಿಲ್ಲೆಯನ್ನು ಒಡೆಯುವುದನ್ನು ತಪ್ಪಿಸಲು ಬಳ್ಳಾರಿಯನ್ನೇ ವಿಜಯನಗರದ ವ್ಯಾಪ್ತಿಗೆ ಸೇರಿಸಲು ನಮ್ಮ ಸಹಮತವಿದೆ ಎಂದು ಉಲ್ಲೇಖಿಸಿದ್ದಾರೆ. ಹಿಂದುಳಿದ ತಾಲೂಕುಗಳನ್ನೆಲ್ಲ ಒಂದು ಕಡೆ ಹಾಕಿ ಜಿಲ್ಲೆ ವಿಭಜನೆ ಮಾಡಿದ್ರೆ ಅಭಿವೃದ್ಧಿ ಮರೀಚಿಕೆಯಾದಿತು ಎಂದು ತಿಳಿಸಿದ್ದಾರೆ.

Exit mobile version