ವಿಶೇಷ ಮಕ್ಕಳಿಗೆ ‘ವರ್ಣ’ ಚಿತ್ರದಲ್ಲಿ ಅರಳಿದ ಅಕ್ಷರಮಾಲೆ

ಮೈಸೂರು, ಡಿ. 30: ಕನ್ನಡ ವರ್ಣಮಾಲೆ ಕಲಿಸಲು ಪೋಷಕರು, ಶಾಲಾ ಶಿಕ್ಷಕರು ನಾನಾ ಕಸರತ್ತು ನಡೆಸುತ್ತಾರೆ. ಆದರೆ ಮಕ್ಕಳಿಗೆ ‘ಅ, ಆ, ಇ, ಈ…’ ಅಕ್ಷರಗಳು ಮಕ್ಕಳ ಮನಸ್ಸಿನಲ್ಲಿ ದೃಢವಾಗಿ ಕೂರುವಂತೆ ಮಾಡಲು ಕಲಾವಿದ ಬಾದಲ್‌ ನಂಜುಂಡಸ್ವಾಮಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಕಲಾವಿದನ ಪ್ರಯತ್ನಕ್ಕೆ
ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಈಗಾಗಲೇ ಬಾದಲ್‌ ಅವರು ಚಿತ್ರಿಸಿರುವ ಸಾಮಾಜಿಕ ಕಳಕಳಿಯ ಚಿತ್ರಗಳು ಮಹೀಂದ್ರ ಸಂಸ್ಥೆಯ ಸಿಇಒ ಆನಂದ್‌ ಮಹೀಂದ್ರಾ ಅವರಿಂದಲೂ ಹಿಡಿದು ಶ್ರೀ ಸಾಮಾನ್ಯರನ್ನೂ ತಲುಪಿದೆ. ಇದೀಗ ಬಾದಲ್‌ ಅವರು ವಿಶೇಷ ಮಕ್ಕಳ ಹಿತದೃಷ್ಟಿಯಿಂದ ಕನ್ನಡ ವರ್ಣಮಾಲೆಗಳು ಪ್ರತಿನಿಧಿಸುವ ವಸ್ತುಗಳನ್ನು ಆ ಅಕ್ಷರದಿಂದಲೇ ಹೊಮ್ಮುವಂತೆ ಚಿತ್ರಿಸಿದ್ದಾರೆ.

ಅ- ಅಳಿಲು, ಆ- ಆನೆ, ಇ- ಇಲಿ, ಈ – ಈರುಳ್ಳಿ, ಉ- ಉಂಗುರ ಹೀಗೆ ಆಯಾ ಅಕ್ಷರಗಳು ಪ್ರತಿನಿಧಿಸುವ ಚಿತ್ರಗಳನ್ನು ವಿಶೇಷ ಮಕ್ಕಳಿಗಾಗಿ ಬಾದಲ್‌ ಬರೆದಿದ್ದಾರೆ. ಮೈಸೂರಿನ ಆಯಿಷ್‌ (ಆಲ್‌ ಇಂಡಿಯಾ ಇನ್ಸ್‌ಟ್ಯೂಟ್‌ ಆಫ್‌ ಸ್ಪೀಚ್‌ ಅಂಡ್‌ ಇಯರಿಂಗ್)‌ ಮಕ್ಕಳಿಗಾಗಿ ಬಾದಲ್‌ ಅವರು ಈ ವರ್ಣಮಾಲೆಗಳನ್ನು ಚಿತ್ರಿಸಿದ್ದಾರೆ.
“ವಿಶೇಷ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಬೇಕಾಗುತ್ತದೆ. ಈ ರೀತಿ ಅಕ್ಷರಗಳಿಂದಲೇ ಅದನ್ನು ಪ್ರತಿನಿಧಿಸುವ ವಸ್ತುಗಳನ್ನು ಮಕ್ಕಳು ಗಮನಿಸಿದಾಗ ಅದನ್ನು ಮಕ್ಕಳು ಬೇಗನೆ ಗ್ರಹಿಸುತ್ತಾರೆ, ಎಂಬುದು ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರ ಅಭಿಪ್ರಾಯ.

ವಿಶೇಷ ಮಕ್ಕಳಿಗಾಗಿ ಬಾದಲ್‌ ಅವರು ವರ್ಣಮಾಲೆಗಳ ಚಿತ್ರವನ್ನು ಬರೆದಿದ್ದಾರೆ. ಇನ್ನೂ ಆ ಚಿತ್ರಗಳು ಮಕ್ಕಳ ಕೈ ಸೇರಿಲ್ಲ. ಖಂಡಿತವಾಗಿಯೂ ಅವು ಉಪಯುಕ್ತವಾಗಲಿವೆ ಎಂದು ಅಯಿಷ್ ಸಾರ್ವಜನಿಕ ಸಂಪರ್ಕಾಧಿಕಾರಿ ಕೀರ್ತಿ ತಿಳಿಸಿದ್ದಾರೆ.

Exit mobile version