ವಿಶ್ವಮಾನವರಾಗಿ ಎನ್ನುವ ಬಿಜೆಪಿಯವರು ಮತ್ತೊಂದೆಡೆ ಮಾಂಸ ತಿನ್ನುವವರ‌ನ್ನು ದ್ವೇಷಿಸುತ್ತಾರೆ: ಸಿದ್ದರಾಮಯ್ಯ

ಮೈಸೂರು, ಜ. 13: ಗೋ ಮಾಂಸ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಕ್ ಸಮರ ಮುಂದುವರಿದಿದ್ದು, ಒಂದು ಕಡೆ ವಿಶ್ವಮಾನವರಾಗಿ ಎನ್ನುವ ಬಿಜೆಪಿಯವರು ಮತ್ತೊಂದು ಕಡೆ ಕುರಿ, ಕೋಳಿ, ಗೋಮಾಂಸ ತಿನ್ನುವವರ‌ ವಿರುದ್ಧ ದ್ವೇಷವನ್ನು ಕಾರುತ್ತಾರೆ ಎಂದು ಟೀಕಿಸಿದ್ದಾರೆ.

ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು ಬಿಎಸ್ವೈ ಹೇಳಿದ್ದಾರೆ. ಆದರೆ ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ. ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೋಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಸಂಸ್ಕೃತಿ, ಆಹಾರ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ರಾಜಕೀಯ ಬೆಳವಣಿಗೆಯ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಬಿಎಸ್ವೈ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಒಂದೈದು ಪೂರ್ತಿ ವರ್ಷ ಮುಖ್ಯಮಂತ್ರಿಯಾಗಿದ್ದಾರಾ?.

ಕಳೆದ 48 ದಿನಗಳಿಂದ ದೆಹಲಿಯಲ್ಲಿ ರೈತರು ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ-ನಷ್ಟಗಳಿಗೆ ನೇರ ಕಾರಣ. ಸುಪ್ರೀಂಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಅವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿದ ಅವರು, ಹೆಚ್. ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ, ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಬಿಎಸ್ವೈ ಅವರೂ ಇವರನ್ನು ಮಂತ್ರಿ ಮಾಡಿಲ್ಲ ಎಂದು ಕಿಡಿಕಾರಿದರು.

Exit mobile version