ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಆಟೋ, ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಬೆಂಗಳೂರು, ನ. 26: ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಸರ್ಕಾರವನ್ನು ಒತ್ತಾಯಿಸಿ, ಇಂದು  ಬೆಳಗ್ಗಿನಿಂದಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು. ಐಕ್ಯ ಹೋರಾಟ ಸಮಿತಿ ಕೈಗೊಂಡ ಈ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಚಾಲಕರು ಭಾಗಿಯಾಗಿ, ತಮ್ಮ ಬೇಡಿಕೆ ಪೂರೈಸಲು ಸರ್ಕಾರವನ್ನು ಒತ್ತಾಯಿಸಿದರು.

ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಬೇಕು, ಕೇಂದ್ರ ಸರ್ಕಾರವು ಐಎಮ್‌ಎ ಕಾಯ್ದೆಯನ್ನು ವಾಪಸ್‌ ಪಡೆದುಕೊಳ್ಳಬೇಕು, ಸಂಚಾರಿ ಪೋಲೀಸರು ದುಬಾರಿ ದಂಡಗಳನ್ನು ವಿಧಿಸುವುದನ್ನು ನಿಲ್ಲಿಸಬೇಕು, ಹಳೇ ಕಂಪ್ಯೂಟರ್‌ಗಳಲ್ಲಿ ಉಲ್ಲೇಖವಾದ ಕೇಸ್‌ಗಳನ್ನು ರದ್ದು ಮಾಡಬೇಕು, ಫೈನಾನ್ಸಿಯರ್‌ ಕಿರುಕುಳವನ್ನು ತಪ್ಪಿಸಬೇಕು, ಗಾಡಿಗಳ ಮೇಲೆ ಚಕ್ರ ಬಡ್ಡಿಕಿತ್ತುಕೊಳ್ಳುವುದು, ಗುಂಡಾಗಿರಿ ನಡೆಸುವುದನ್ನು ನಿಲ್ಲಿಸಬೇಕು ಎಂಬುದು  ಆಟೋ ಹಾಗೂ ಟ್ಯಾಕ್ಸಿ ಚಾಲಕರ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೇ  ಚಾಲಕರಿಗೆ ಸರ್ಕಾರವು ಈಗಾಗಲೇ ಘೋಷಿಸಿರುವ 5000 ರೂ. ಪರಿಹಾರವು ಆದಷ್ಟು ಬೇಗ ಫಲಾನುಭವಿಗಳಿಗೆ ನೀಡಬೇಕು ಎನ್ನುವುದು ಈ ಚಾಲಕರ ಬೇಡಿಕೆಯಾಗಿದೆ.

ಇದರ ಜತೆಗೆ ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ, ಎಪಿಎಮ್‌ಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಹೀಗೆ ಅನೇಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಈಗಾಗಲೇ ವಿಧಾನಸೌಧಕ್ಕೆ ಹೋಗಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರನ್ನು ಭೇಟಿ ನೀಡಿ  ಮನವಿಯನ್ನು ಸಲ್ಲಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಒಟ್ಟಾರೆಯಾಗಿ 22 ಸಂಘಟನೆಗಳು ಭಾಗಿಯಾಗಿದ್ದಾರೆ.

Exit mobile version