ಮಗನ ಪರ ಮತ ಹಾಕಿಸುವಂತೆ ಸೂಚನೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ ಲಕ್ಷ್ಮಿ ಹೆಬ್ಬಾಳ್ಕರ್.

Belagavi: ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪುತ್ರ ಮೃಣಾಲ್​ಗೆ (Mrinal) ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ (Congress) ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಸಚಿವೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಜತೆ ಸಭೆ ನಡೆಸಿದ್ದಾರೆ. ಮಗ ಮೃಣಾಲ್ ಪರ ಕೆಲಸ ಮಾಡುವಂತೆ ಮತ್ತು ಮತ ಹಾಕಿಸುವಂತೆ ಸೂಚನೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ರಿಂದ (Lakshmi Hebbalkar) ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ (Model Code of Conduct) ಉಲ್ಲಂಘಿಸಿದ್ದಾರೆ.

ಬೆಳಗಾವಿಯ ಕುವೆಂಪು ನಗರದ (Kuvempu Nagar) ಗೃಹ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು (Anganwadi workers) , ಆಶಾ ಕಾರ್ಯಕರ್ತೆಯರ (Asha workers) ಜತೆ ಲಕ್ಷ್ಮೀ ಹೆಬ್ಬಾಳ್ಕರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ 500ಕ್ಕೂ ಅಧಿಕ ಕಾರ್ಯಕರ್ತೆಯರು ಇದ್ದರು. ಆ ಸಭೆಯಲ್ಲಿ ತನ್ನನ್ನು ಬೆಂಬಲಿಸಿದಂತೆ ತನ್ನ ಮಗನನ್ನು ಕೂಡ ಬೆಂಬಲಿಸಿ ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಸಭೆ ನಡೆಸುತ್ತಿದ್ದ ಕಚೇರಿಯ ಮೇಲೆ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ (Flying squad) ಹಠಾತ್ ದಾಳಿ ನಡೆಸಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ, ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಸಭೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಭೆಯಲ್ಲಿದ್ದವರ ಎಲ್ಲರ ಮಾಹಿತಿ ಪಡೆದು ನಂತರ ಅವರನ್ನು ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.

ಈಗಾಗಲೇ ಏಳು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು (Lok Sabha constituencies) ಘೋಷಿಸಿರುವ ಕಾಂಗ್ರೆಸ್ ಬಾಕಿ ಇರುವ 21 ಕ್ಷೇತ್ರಗಳಿಗೆ ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗಿದ್ದು ಉಳಿದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಈ ಮಧ್ಯೆ ಕರ್ನಾಟಕದಲ್ಲಿ(Karnataka) ಐವರು ಸಚಿವರ ಮಕ್ಕಳಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕೂಡ ಒಬ್ಬರಾಗಿದ್ದಾರೆ. ಮಗನಿಗೆ ಟಿಕೆಟ್ ದೊರೆಯುವ ಸಂಪೂರ್ಣ ಭರವಸೆ ಇರುವ ಕಾರಣ ಹೆಬ್ಬಾಳ್ಕರ್ ಅಂಗನವಾಡಿ (Anganwadi workers) ಮತ್ತು ಆಶಾ ಕಾರ್ಯಕರ್ತೆಯರ (Asha workers) ಜೊತೆ ಸಭೆ ನಡೆಸಿ ಮಗನ ಪರ ಕೆಲಸ ಮಾಡುವಂತೆ ಅವರಲ್ಲಿ ಮನವಿ ಮಾಡಿದ್ದಾರೆ.

Exit mobile version