ಇದೆಂಥಾ ಅಚ್ಚೇ ದಿನ್‌? ವಿದ್ಯುತ್‌, ನೀರು, ರಸ್ತೆ, ಚರಂಡಿ ಇಲ್ಲದೆ ಸೊರಗಿದ್ದಾರೆ ರಾಯಚೂರಿನ ಯಲಗೋಡ ಗ್ರಾಮಸ್ಥರು

ಇದೆಂಥಾ ಅಚ್ಚೇ ದಿನ್‌? Is this is ‘ache Din’?

ಇಂಥಾ ಜಗಳದ ದೃಶ್ಯಗಳು ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಯಲಗೋಡು ಗ್ರಾಮಪಂಚಾಯಿತಿಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತೆ. ಇದಕ್ಕೆ ಕಾರಣ ಈ ಗ್ರಾಮಪಂಚಾಯತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚಾವತಾರ. ಇಲ್ಲಿ ಏನೇ ದಾಖಲೆಗಳನ್ನು ಪಡೀಬೇಕಾದ್ರೂ ಪಂಚಾಯತ್‌ ಸಿಬ್ಬಂದಿಗೆ ಲಂಚ ನೀಡಲೇ ಬೇಕು ಅನ್ನೋದು ಗ್ರಾಮಸ್ಥರ ಆರೋಪ.

ತಮಾಷೆ ಅಂದ್ರೆ ಯಲಗೋಡು ಗ್ರಾಮ ಪಂಚಾಯತಿ ಕಚೇರಿ ಬಾಗಿಲು ತೆಗೆಯೋದೇ ಅಪರೂಪ. ಇನ್ನು ತೆಗೆದ್ರೂ ಅಲ್ಲಿ ಪಿಡಿಓ, ಸೆಕ್ರೆಟರಿ ಕಾಣ ಸಿಗೋದೇ ಅಪರೂಪದಲ್ಲಿ ಅಪರೂಪ. ಏನಾದ್ರೂ ಕಮಿಷನ್‌ ಕಲೆಕ್ಟ್‌ ಮಾಡೋ ಕೆಲಸ ಇದ್ರೆ ಮಾತ್ರ ಹಾಜರಾಗ್ತಾರೆ ಅನ್ನೋದು ಗ್ರಾಮಸ್ಥರ ಆರೋಪ.   ಕಚೇರಿಗೆ ಬರದ ಪಿಡಿಓ ಮತ್ತು ಸೆಕ್ರೆಟರಿ ಈ ಗ್ರಾಮದ ಉದ್ಧಾರ ಹೇಗೆ ಮಾಡಿರಬಹುದು? ನೀವೇ ಒಮ್ಮೆ ಈ ಗ್ರಾಮದ ಜನರ ಗೋಳು ಕೇಳಿ.

ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದವು. ಜನರಿಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ನೂರಾರು ಯೋಜನೆ ಬಂದಿದ್ರೂ ಯಲಗೋಡು ಗ್ರಾಮದ ಜನರಿಗೆ ಇನ್ನೂ ವಿದ್ಯುತ್‌ ಭಾಗ್ಯ ಲಭಿಸಿಲ್ಲ.

ಇನ್ನು ಇಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಇದೆ. ಅದನ್ನು ಸ್ವಚ್ಛ ಮಾಡಿ ದಶಕಗಳೇ ಕಳೆದಿರಬೇಕು. ಪಂಚಾಯತಿಯಲ್ಲಿ ಬಿಲ್‌ಗಳು ಪಾಸಾಗಿವೆ ಆದ್ರೆ ಟ್ಯಾಂಕ್‌ನ ಕೊಳೆ ಮಾತ್ರ ಫೀಟ್‌ಗಟ್ಟಲೆ ಹಾಗೆ ನಿಂತು ಬಿಟ್ಟಿದೆ.

ಟ್ಯಾಂಕ್‌ನಲ್ಲಿ ಹುಳ ಹುಪ್ಪಟೆ ತುಂಬಿ ಹೋಗಿತ್ತು. ಕೊರೋನಾ ಜೊತೆ ಈ ನೀರು ಕುಡಿದು ಬೇರೆ ಕಾಯಿಲೆ ಬರಬಾರದು ಅನ್ನೋ ಕಾರಣಕ್ಕೆ ಗ್ರಾಮಸ್ಥರೇ ಸ್ವಚ್ಛ ಮಾಡಿದ್ದಾರೆ.

ಇಲ್ಲಿ ಒಂದು ಅಂಗನವಾಡಿ ಕೇಂದ್ರ ಇದೆ. ಅಲ್ಲಿ ನಡೀತಿರೋದು ಬರೀ ಗೋಲ್‌ಮಾಲ್‌. ಮಕ್ಕಳ, ಬಸುರಿ, ಬಾಣಂತಿಯರಿಗೆ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥಗಳು ಅನ್ಯರ ಪಾಲಾಗುತ್ತಿದೆ ಅನ್ನೋದು ಸ್ಥಳೀಯರ ದೂರು.

ಕನಿಷ್ಠ ಮೂಲಭೂತ ಸೌಕರ್ಯವನ್ನೂ ಕೊಡದೆ ಯಲಗೋಡ್‌ ಗ್ರಾಮಪಂಚಾಯತ್‌ ಈ ಜನರನ್ನು ವಂಚಿಸಿದೆ. ಇದರ ಬಗ್ಗೆ ಜನ ಆಕ್ರೋಶಿತರಾಗಿದ್ದಾರೆ.

ಇಲ್ಲಿನ ಪಂಚಾಯಿತಿ ಸಿಬ್ಬಂದಿಗೆ ಜನರ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ಜನರ ಹೆಸರಲ್ಲಿ ಬರೋ ಎಲ್ಲಾ ಯೋಜನೆಗಳ ಬೋಗಸ್‌ ದಾಖಲೆ ಸೃಷ್ಟಿಸಿ ತಾವೇ ಗುಳುಂ ಮಾಡುತ್ತಿದ್ದಾರೆ. ಪಂಚಾಯಿತಿಗೆ ಬರೋ ಹಣವನ್ನೆಲ್ಲಾ ನುಂಗಿದ್ರಿಂದ ಬೋರ್‌ವೆಲ್‌ಗೆ ಒಂದು ಸ್ಟಾಟರ್‌ ಹಾಕೋದಕ್ಕೂ ಕಾಸಿಲ್ಲ ಅಂತಾರೆ.

ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಇಂಥಾ ಭ್ರಷ್ಟ, ಲಂಚಕೋರ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು. ಯಲಗೋಡು ಮಂದಿಯ ನೋವು ಆಲಿಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು ಅನ್ನೋದು ವಿಜಯಟೈಮ್ಸ್‌ ಒತ್ತಾಯ.

ಯಲಗೋಡದಿಂದ ಸಂಗಮೇಶ್ M. K, ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Exit mobile version