ಮುಖಕ್ಕೆ ಮಸಿ ಬಳಿಯುವ ಮೂಲಕ ಸಾಧಿಸುವುದಾದರು ಏನು?

Rakesh Tikait

ಇತ್ತೀಚಿನ ದಿನಗಳಲ್ಲಿ ಮುಖಕ್ಕೆ ಮಸಿ ಬಳಿಯುವ ಮೂಲಕ ತಮ್ಮ ಪ್ರತಿರೋಧ ದಾಖಲಿಸುವರ ಸಂಖ್ಯೆ ಹೆಚ್ಚುತ್ತಿದೆ.

ತಮ್ಮ ಸೈದ್ದಾಂತಿಕ ವಿರೋಧಿಯ ಮುಖಕ್ಕೆ ಮಸಿ ಬಳಿದು, ತಮ್ಮ ವಿರೋಧವನ್ನು ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಮೂಲಭೂತವಾಗಿ ತಮ್ಮ ಸೈದ್ದಾಂತಿಕ ನಿಲುವುಗಳಲ್ಲೇ ಸ್ಪಷ್ಟತೆ ಇರುವುದಿಲ್ಲ. ಇದೊಂದು ಅತ್ಯಂತ ಕೀಳು ಮಟ್ಟದ ಪ್ರಚಾರದ ಪ್ರತಿರೋಧ. ಇಲ್ಲಿ ಮಸಿ ಬಳಿಯುತ್ತಿರುವುದು ವಿರೋಧಿಯ ಮುಖಕ್ಕೆ, ಆದರೆ ಅದರ ಕಪ್ಪು ಬಣ್ಣದ ಅಂಧಕಾರ ಬಳಿದವನ ವ್ಯಕ್ತಿತ್ವದ ಸಂಕೇತವಾಗಿದೆ. ಮುಖಕ್ಕೆ ಬಳಿದ ಕಪ್ಪುಮಸಿ ನೀರಿನಿಂದ ತೊಳೆದರೆ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

ಆದರೆ ಬಳಿದವನ ಮನಸ್ಸಿನೊಳಗಿನ ಕಪ್ಪು ಬಣ್ಣದ ಅಂಧಕಾರವನ್ನು ತೊಳೆಯುವುದು ಹೇಗೆ? ಭಿನ್ನವಿದ್ದು ಬೆರೆಯಬಹುದು ಎಂಬ ಜಿಎಸ್‍ಎಸ್‍ನವರ ಮಾತಿನಂತೆ ನಮ್ಮ ನಡುವೆ ಇರುವ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮತ್ತು ರಾಜಕೀಯ ಪ್ರತಿರೋಧಗಳನ್ನು ಚರ್ಚೆಗಳ ಮೂಲಕ ಮಾತ್ರ ವ್ಯಕ್ತಪಡಿಸಬೇಕು. ಭಿನ್ನತೆಗಳ ನಡುವೆಯೂ ಸಮಾಜದ ಸ್ವಾಸ್ಥ್ಯಕ್ಕಾಗಿ ನಾವೆಲ್ಲರೂ ಬೆರೆಯಬೇಕು. ರೈತಪರ ಹೋರಾಟಗಾರ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದದ್ದು ಉತ್ತಮ ಬೆಳವಣಿಗೆಯಲ್ಲ.

ಇದು ಕೀಳು ಮನಸ್ಥಿತಿಯ ಸಂಕೇತವಾಗಿದೆ. ರಾಕೇಶ್ ಟಿಕಾಯತ್ ಅವರ ನಿಲುವುಗಳನ್ನು ಟೀಕಿಸಬಹುದು, ಆದರೆ ಅವರ ಮುಖಕ್ಕೆ ಮಸಿ ಬಳಿದಿರುವುದನ್ನು ಸಮರ್ಥಿಸುವುದು ಆರೋಗ್ಯವಂತ ನಾಗರಿಕ ಸಮಾಜದ ಲಕ್ಷಣವಲ್ಲ. ಈ ದೇಶದಲ್ಲಿ ಬ್ರಿಟಿಷರ ಕ್ರೌರ್ಯವನ್ನು ಗಾಂಧಿಜೀಯವರು ಎದುರಿಸಿದ್ದು, ಅಹಿಂಸೆ ಎಂಬ ಅಸ್ತ್ರದ ಮೂಲಕ. ಹೀಗಾಗಿ ನಾವು ನಮ್ಮ ಎಲ್ಲ ಪ್ರತಿರೋಧವನ್ನು ಅಹಿಂಸೆಯ ನೆಲೆಗಟ್ಟಿನ ಮೂಲಕವೇ ದಾಖಲಿಸೋಣ.

ಇಂದು ನಾವು ಹಿಂಸೆಯ ಬೀಜ ಭಿತ್ತಿದರೆ ಹಿಂಸೆಯ ಫಲವೇ ದೊರೆಯುತ್ತದೆ. ಅಹಿಂಸೆಯ ಬೀಜ ಭಿತ್ತಿದರೆ, ಭವಿಷ್ಯದಲ್ಲಿ ಶಾಂತಿಯ ಫಲ ದೊರೆಯುತ್ತದೆ.

Exit mobile version