ಮದ್ದು ಹಾಕುವ ರೋಗ ಇರುವವರು ಯಾರು ಸಿಗದಿದ್ದರೆ ಕೊನೆಗೆ ಮನೆಯವರಿಗೆ ಮದ್ದು ಹಾಕುತ್ತಾರೆ: ನಳಿನ್ ಕುಮಾರ್ ವಿರುದ್ಧ ದಿನೇಶ್ ಗುಂಡೂರಾವ್ ಟೀಕೆ

ಬೆಂಗಳೂರು, ಜು. 20: ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ ಬಿಜೆಪಿ ಯಲ್ಲಿ ದೊಡ್ಡ ಚರ್ಚೆಗೆ ಆಸ್ಪದ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ‌ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ

ಈ ಸಂಬಂಧ ಟ್ವೀಟ್ ಮಾಡಿರುವ ಅವರು,‌ ಕೆಲವರಿಗೆ ಮದ್ದು ಹಾಕುವ ಕೆಟ್ಟ ರೋಗವಿರುತ್ತದೆ. ಅವರಿಗೆ ಮದ್ದು ಹಾಕಲು ಯಾರೂ ಸಿಗದಿದ್ದರೆ ಕೊನೆಗೆ ಮನೆಯವರಿಗೆ ಮದ್ದು ಹಾಕುತ್ತಾರೆ. ನಳಿನ್ ಕುಮಾರ್ ಕಟೀಲ್ ಅವರ ಸಿಎಂ ಬದಲಾವಣೆ ಆಡಿಯೋ ಲೀಕ್ ಹಿಂದೆಯೂ ಕೇಂದ್ರದ ಕೈವಾಡವಿರಬಹುದು. ಕಟೀಲ್‌ರವರೇ ನಿಮ್ಮ ಆಡಿಯೋ ಲೀಕ್ ಹಿಂದಿನ ರಹಸ್ಯವೇನು ಎಂಬುದನ್ನು ಒಮ್ಮೆ ಅಮಿತ್ ಶಾ ಬಳಿ ಕೇಳಿ ತಿಳಿದುಕೊಳ್ಳಿ ಎಂದು ಟೀಕಿಸಿದ್ದಾರೆ.

ಅಲ್ಲದೇ ಪೆಗಸಸ್ ಸ್ಪೈವೇರ್‌ ಮೂಲಕ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವ ಕೇಂದ್ರದ ದುಷ್ಟ ಬುದ್ದಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೂ ಕಣ್ಗಾವಲು ನಡೆಸಿರುವುದು ಕ್ರಿಮಿನಲ್‌ಗಳು ಮಾಡುವಂತ ಕೆಲಸ. ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಕ್ರಿಮಿನಲ್‌ಗಳೇ ಇರುವಾಗ ಕ್ರಿಮಿನಲ್ ಕೆಲಸವಲ್ಲದೆ ಒಳ್ಳೆ ಕೆಲಸ ಮಾಡಲು ಸಾಧ್ಯವೇ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು ಅಸಮರ್ಥ ನಾಯಕನಿಗೆ ಸದಾ ಅಸ್ತಿತ್ವದ ಭಯ ಕಾಡುತ್ತದೆ. ಮೋದಿ ಅವರಿಗೂ ಈಗ ಅಸ್ತಿತ್ವದ ಭಯವಿದೆ. ಹಾಗಾಗಿ ಪೆಗಾಸಸ್ ಮೂಲಕ ಮುಖ್ಯ ನ್ಯಾಯಮೂರ್ತಿ, ರಾಜಕೀಯ ನಾಯಕರು ಹಾಗೂ ಪತ್ರಕರ್ತರ ಚಲನವಲನಗಳ ಮೇಲೆ ಕಣ್ಗಾವಲು ಇಡುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ. ಕೇಂದ್ರದ ಈ ಕೃತ್ಯ, ವ್ಯಕ್ತಿಗಳ ಖಾಸಗಿ ಹಕ್ಕಿನ ಉಲ್ಲಂಘನೆಯ ಜೊತೆ ಅಪರಾಧ ಕೂಡ ಹೌದು ಎಂದಿದ್ದಾರೆ.

Exit mobile version