ಬೆಲೆ ಏರಿಕೆಯ ಬಗ್ಗೆ ಸಚಿವರ ಮೌನವೇಕೆ : ಡಿಕೆ ಶಿವಕುಮಾರ್ ಪ್ರಶ್ನೆ

ಮಂಗಳೂರು, ಫೆ. 27: ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲುಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ ಕೆ. ಪಿ. ಸಿ. ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸುದ್ದಿಗಾರರಲ್ಲಿ ಮಾತನಾಡಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಗಗನಕ್ಕೇರಿದೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಬೆಲೆ ಏರಿಕೆಯ ಬಗ್ಗೆ ಹೇಳಿಕೆ ನೀಡುತ್ತಿದ್ದವರು ಇಂದು ಸಚಿವರಾಗಿದ್ದಾರೆ. ಆದರೆ, ಬೆಲೆ ಏರಿಕೆಯ ಬಗ್ಗೆ ಮೌನ ಯಾಕೆ ಎಂದು ಪ್ರಶ್ನಿಸಿದರು.

ಇಂಧನದ ಬೆಲೆ ಏರಿಕೆಯಾದ ತಕ್ಷಣ ಇತರ ಎಲ್ಲದರ ಬೆಲೆಯೂ ಹೆಚ್ಚಾಗಲಿದೆ. ಇದರಿಂದ ಬದುಕು ಸಾಗಿಸುವುದೇ ಕಷ್ಟವಾಗಿದೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಬೆಲೆ ಏರಿಕೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದವರು ಇಂದು ಸ್ವತ ಸಚಿವರಾಗಿದ್ದಾರೆ. ಆದರೆ ಬೆಲೆ ಏರಿಕೆಯ ವಿರುದ್ಧ ಅವರು ಮಾತನ್ನೇ ಆಡುತ್ತಿಲ್ಲ. ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೋಟ್ಪಾ ನೀತಿಯ ವಿರುದ್ಧ ಲಕ್ಷಾಂರ ಬೀಡಿ ಕಾರ್ಮಿಕರು ಬೀದಿಗಿಳಿದಿದ್ದಾರೆ. ದ.ಕ.ಜಿಲ್ಲೆಯಲ್ಲೂ ಬೀಡಿ ಕಾರ್ಮಿಕರು ಧ್ವನಿ ಎತ್ತಿದ್ದಾರೆ. ಆದರೆ, ಬಿಜೆಪಿಗರು ಯಾರೂ ಕೂಡ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಜನಸಾಮಾನ್ಯರ ನೋವಿಗೆ ಕಾಂಗ್ರೆಸ್ ಧ್ವನಿಯಾಗಲಿದೆ ಎಂದು ಡಿ.ಕೆ.ಶಿವಕುಮಾರ್ ನುಡಿದರು.

ಕೊರೋನ ಸಂದರ್ಭ ರಾಜ್ಯ ಸರಕಾರ ಅನೇಕ ನೆರವಿನ ಯೋಜನೆಗಳನ್ನು ಘೋಷಿಸಿತ್ತು. ಆದರೆ, ಸರಕಾರ ಈವರೆಗೂ ಆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಕೊಟ್ಟ ಮಾತನ್ನು ಉಳಿಸದೆ ಕೊರೋನ ಸಂದರ್ಭವೂ ಅಧಿಕ ತೆರಿಗೆ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದರು. ಈ ಸಂದರ್ಭ ಮಾಜಿ ಶಾಸಕ ಮೊಯ್ದಿನ್ ಬಾವ, ಕಾರ್ಪೊರೇಟರ್ ಎಸಿ ವಿನಯರಾಜ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Exit mobile version