Wipro: ವಿಪ್ರೋ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌. ವರ್ಕ್ ಫ್ರಂ ಹೋಂ ಅಂತ್ಯ,ಇವತ್ತಿನಿಂದ ಆಫೀಸ್ನಿಂದ ಕೆಲಸ

ವರ್ಕ್‌ ಫ್ರಂ ಹೋಂನಿಂದ ತಲೆಕೆಟ್ಟ ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌. ಬರೋಬ್ಬರಿ 18 ತಿಂಗಳ ಬಳಿಕ  ವಿಪ್ರೋ ಉದ್ಯೋಗಿಗಳು ಆಫೀಸಿಗೆ ಬಂದಿದ್ದಾರೆ. ವಿಪ್ರೋದ ಉದ್ಯೋಗಿಗಳು ಇವತ್ತಿನಿಂದ ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ಮಾಡುತ್ತಾರೆ.

ಬೆಂಗಳೂರು: ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ (Work From Home) ನೀಡಲಾಗಿತ್ತು. ಇದೀಗ ಕೊರೊನಾ ಆರ್ಭಟ (Covid Pandemic) ಕೊಂಚ ಕಡಿಮೆಯಾಗುತ್ತಿರುವುದರಿಂದ ಮತ್ತೆ ಉದ್ಯೋಗಿಗಳನ್ನು ಆಫೀಸಿಗೆ ಬರಲು ಸೂಚಿಸಲಾಗಿದೆ. ಭಾರತದ ಬೃಹತ್ ಕಂಪನಿಗಳಲ್ಲಿ ಒಂದಾದ ವಿಪ್ರೋ (Wipro) ತನ್ನ ಉದ್ಯೋಗಿಗಳಿಗೆ ಇವತ್ತಿನಿಂದ (ಸೋಮವಾರದಿಂದ) ಆಫೀಸಿಗೆ ಬರಲು ಸೂಚಿಸಿದೆ. ಬರೋಬ್ಬರಿ 18 ತಿಂಗಳ ವರ್ಕ್ ಫ್ರಂ ಹೋಂ ಮುಗಿಸಿ ವಿಪ್ರೋ ಉದ್ಯೋಗಿಗಳು ಈಗ ಕಚೇರಿಯತ್ತ ಹೆಜ್ಜೆ ಹಾಕಿದ್ದಾರೆ.

ಎರಡೂ ಡೋಸ್ ಕೊರೊನಾ ಲಸಿಕೆಗಳನ್ನು ಪಡೆದ ವಿಪ್ರೋ ಉದ್ಯೋಗಿಗಳಿಗೆ ಮಾತ್ರ ಆಫೀಸಿಗೆ ಬರಲು ಸೂಚಿಸಲಾಗಿದೆ. ಹಾಗಂತ ವಾರಪೂರ್ತಿ ಅವರು ಆಫೀಸಿಗೆ ಬರಬೇಕೆಂದೇನೂ ಇಲ್ಲ. ವಿಪ್ರೋದ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ಮಾಡಬೇಕು. ಆದರೆ, ಆ ಉದ್ಯೋಗಿಗಳು ಎರಡು ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ.

ಈ ಬಗ್ಗೆ ವಿಪ್ರೋ ಚೇರ್ಮನ್ ರಿಷದ್ ಪ್ರೇಮ್​ಜಿ ಮಾಹಿತಿ ನೀಡಿದ್ದು, 18 ತಿಂಗಳ ಬಳಿಕ ವಿಪ್ರೋದ ಉದ್ಯೋಗಿಗಳು ಆಫೀಸಿಗೆ ಬರುತ್ತಿದ್ದಾರೆ. ವಾರದಲ್ಲಿ ಎರಡು ದಿನ ಆಫೀಸಿನಿಂದ ಕೆಲಸ ಮಾಡಲಿದ್ದಾರೆ. ಉಳಿದ ಮೂರು ದಿನ ವರ್ಕ್ ಫ್ರಂ ಹೋಂ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಕೊವಿಡ್ ಲಸಿಕೆಯನ್ನೂ ಹಾಕಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ವಿಪ್ರೋ ಆಫೀಸ್​ಗಳಲ್ಲಿ ಕೊವಿಡ್ ನಿಯಮಾವಳಿಗಳನ್ನು ಯಾವ ರೀತಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ವಿಡಿಯೋವನ್ನು ಕೂಡ ರಿಷದ್ ಪ್ರೇಮ್​ಜಿ ಹಂಚಿಕೊಂಡಿದ್ದಾರೆ.

Exit mobile version