World Bicycle Day: ಅಬಾಲವೃದ್ದರ ಪ್ರಿಯ ಸೈಕಲ್ ಬೈಕ್ , ಕಾರ್, ಬಸ್ (Bike-Car-Bus) ಬರುವ ಮುನ್ನವೇ ಅಸ್ತಿತ್ವಕ್ಕೆ ಬಂದಿದ್ದು. ಗ್ರಾಮೀಣ ಭಾಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಸೈಕಲ್ ಅನ್ನೇ ಅವಲಂಬಿಸಿದ್ದರು. ಜನಸಾಮಾನ್ಯನ ಪಾಲಿಗೆ ಸೈಕಲ್ ಇಂದಿಗೂ ಸಂಚಾರ ಸಾಧನವಾಗಿದ್ದರೆ, ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್ (Cycle) ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್ ಪೆಡಲ್ಗಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಇಂದು ನಮ್ಮ ಮುಂದಿವೆ.
![](https://sp-ao.shortpixel.ai/client/to_webp,q_glossy,ret_img,w_788,h_366/https://vijayatimes.com/wp-content/uploads/2024/06/original_Screenshot_2022-08-15_180327.jpg)
ವಾಕಿಂಗ್ (Walking) ಬಿಟ್ಟರೆ ದೇಹದ ವ್ಯಾಯಾಮಕ್ಕೆ ಸೈಕಲ್ ತುಳಿ ಯುವುದಕ್ಕಿಂತ ಮಿಗಿಲಾದ ಚಟು ವಟಿಕೆ ಇನ್ನೊಂದಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆಗಳಿಂದ ದೂರ ವುಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಬಹುದು.
ಸೈಕಲ್ ಎಂದರೆ ಅದೊಂದು ವಿಸ್ಮಯದ ಆಗರ. ಪುಟ್ಟಪುಟ್ಟ ಹೆಜ್ಜೆಯನಿಟ್ಟು ನಡೆವ ಕಂದಮ್ಮನಿಗೆ ಆಗಲೇ ಮೂರು ಚಕ್ರದ ಸೈಕಲ್ (Cycling), ಮೂರು ಚಕ್ರದ ಸೈಕಲ್ನಲ್ಲಿ ಪ್ರಪಂಚವನ್ನೇ ಸುತ್ತಿದಂತೆ, ಮನೆಯ ಮೂಲೆಮೂಲೆಗಳನ್ನು ಸುತ್ತುವ ಪುಟಾಣಿಗಳ ಆನಂದವು ಮಾತಿಗೆ ನಿಲುಕದ್ದು. ಹಾಗೆಯೇ ಬಾಲ್ಯದ ಆರಂಭದ ದಿನಗಳಿಗೆ ಕಾಲಿಡುವಾಗ ಪುಟಾಣಿಗಳ ಸಂಗಾತಿಯಾಗಿ ದೊಡ್ಡದೆರೆಡು ಚಕ್ರಗಳಿಗೆ ಬೆಂಗಾವಲಾಗಿ ನಿಲ್ಲವ ಪುಟ್ಟದೆರೆಡು ಚಕ್ರಗಳಿರುವ ಸೈಕಲ್ ಮನೆಯಂಗಳಕ್ಕೆ ಬರುವುದು ಸಾಮಾನ್ಯ.
ಮನೆಯಂಗಳವನ್ನೂ ದಾಟಿ, ತನ್ನ ಓರಗೆಯ ಮಕ್ಕಳೊಡನೆ ಆಟವಾಡುವ ಪುಟಾಣಿ ಗಳ ಸಾಮ್ರಾಜ್ಯಕ್ಕೆ ನಾಲ್ಕು ಚಕ್ರದ ಈ ಪುಟ್ಟ ಸೈಕಲ್ ಮಹಾರಾಜ. ಹದಿಹರೆಯದ ವಯಸ್ಸಿನಲ್ಲಿ ಇಂಧನ ಬಳಸಿ ಸಾಗುವ ದ್ವಿಚಕ್ರ ವಾಹನಗಳಿಗೂ ಕಡಿಮೆ ಇಲ್ಲವೆಂಬಂತೆ, ಶರವೇಗದಲ್ಲಿ ತುಳಿಯುವ ಸಾಮಾನ್ಯ ಸೈಕಲ್ ಹಾಗೂ ಆಧುನಿಕ ಗೇರ್ ಸೈಕಲ್ಗಳು ಮಕ್ಕಳಿಗೆ ವ್ಯಾಯಾಮದೊಂದಿಗೆ ಆಪ್ತಮಿತ್ರನಾಗುತ್ತದೆ .ಪ್ರಸ್ತುತ ಕಾಲಘಟ್ಟದಲ್ಲಿ ವಯಸ್ಕರು, ಹಿರಿಯ ನಾಗರಿಕರೂ ಕೂಡ ದೈಹಿಕ ಆರೋಗ್ಯದ ದಿವ್ಯಔಷಧ ವೆಂಬಂತೆ ಸೈಕಲ್ ಅನ್ನು ಬಳಕೆ ಮಾಡುತ್ತಿರುವುದು ಸೈಕಲ್ನ ಸಾರ್ವಕಾಲಿಕ ಉಪಯುಕ್ತತೆ ಹೊಂದಿದೆ.
![Cycling](https://sp-ao.shortpixel.ai/client/to_webp,q_glossy,ret_img,w_1024,h_630/https://vijayatimes.com/wp-content/uploads/2024/06/dtm9edd8_cycling_625x300_05_August_20-1024x630.jpg)
ವಯಸ್ಸಿನ ಭೇದ ವಿಲ್ಲದೆ, ಸೈಕಲ್ ರೇಸ್ಗಳಲ್ಲಿ ಪಾಲ್ಗೊಂಡು, ವಾರಾಂತ್ಯದ ದಿನಗಳಲ್ಲಿ ಮುದ ಪಡೆಯುವ ಒಂದಿಷ್ಟು ಸೈಕಲ್ ಪ್ರೇಮಿಗಳೂ ಇದ್ದಾರೆ ಎಂಬುದು ಸೈಕಲ್ನ ಪಾರುಪತ್ಯವನ್ನು ತೋರಿಸುತ್ತದೆ.ವಾಯು ಮಾಲಿನ್ಯದಿಂದ ತತ್ತರಿಸಿರುವ ಇಳೆಯ ಮಾಲಿನ್ಯದ ಕೊಳೆ ಕಡಿಮೆ ಮಾಡಲು ಸೈಕಲ್ ಬಳಕೆ ಅನಿವಾರ್ಯವಾಗಿದೆ.
18ನೇ ಶತನಮಾನದಲ್ಲಿ, ಯುರೋಪಿಯನ್ (European) ದೇಶದ ಕುಶಲಕರ್ಮಿಗಳು ಈ ಬೈಸಿಕಲ್ ಅನ್ನು ಅವಿಷ್ಕಾರ ಮಾಡಿದರು. ಮೊದಲ ಬಾರಿಗೆ 1816ರಲ್ಲಿ ಪ್ಯಾರಿಸ್ನಲ್ಲಿ ಕಾಣಿಸಿಕೊಂಡಿತು. ಮೊದಲು ಇದರ ಚಕ್ರವನ್ನು ಹಾಬಿ ಅಥವಾ ಕುದುರೆ ಗಾಡಿ ಎಂದು ಕರೆಯುತ್ತಿದ್ದರು. 1885ರಲ್ಲಿ ಇದಕ್ಕೆ ಫುಡ್ ಪೆಡಲ್ ಅನ್ನು ಅವಿಷ್ಕಾರ ಮಾಡಲಾಯಿತು. ಇದಾದ ಬಳಿಕ ನಿಧಾನವಾಗಿ ಒಂದೊಂದೇ ಆವಿಷ್ಕಾರ ನಡೆಸುವ ಮೂಲಕ ಸೈಕಲ್ ಅನ್ನು ಸೃಷ್ಟಿಸಲಾಯಿತು. ಬಳಿಕ ಸಂಪೂರ್ಣವಾಗಿ ಬೈಸಿಕಲ್ ಅಭಿವೃದ್ಧಿ ಪಡಿಸಲಾಯಿತು.
ಅಲ್ಲಿಂದ ಇಲ್ಲಿಯವರೆಗೂ ಕೂಡ ಸೈಕಲಿಂಗ್ ಅಭ್ಯಾಸ ಹೊಂದಿರುವ ಮುಂದಿ ಆರೋಗ್ಯಯುತವಾಗಿದ್ದಾರೆ. 2018 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷದ ಜೂನ್ (June) 3 ರಂದು “ವಿಶ್ವ ಬೈಸಿಕಲ್ ದಿನ’ವಾಗಿ ಆಚರಿಸಲು ನಿರ್ಧರಿಸಲಾಯಿತು. ಪರಿಸರ ಸ್ನೇಹಿ ಸೈಕಲ್ಗೆ ಇನ್ನೂರರ ಹರೆಯ ದಾಟಿದ್ದರೂ ವಿಶ್ವ ಸೈಕಲ್ ದಿನವಿನ್ನೂ ಮೂರರ ಎಳೆಯ ಮಗು!ಮಾನವನ ದಿನಚರಿಯಲ್ಲಿ ಹಾಸುಹೊಕ್ಕಾಗಿರುವ ಸೈಕಲ್ ಎಲ್ಲ ಆಧುನಿಕ ವಾಹನಗಳ ಭರಾಟೆಯ ಹೊರ ತಾಗಿಯೂ ಇಂದಿಗೂ ಒಂದಲ್ಲ ಒಂದು ತೆರನಾಗಿ ಬಳಕೆಯಾಗುತ್ತಿದೆ.
ಇದು ತೂಕ ಮಾತ್ರವಲ್ಲದೇ, ಸ್ನಾಯುಗಳ ಬಲಗೊಳಿಸಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ದೇಹಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಲಾಭ ನೀಡುತ್ತದೆ. ಮೊದಲಿಗೆ, ಇದು ದೇಹವನ್ನು ಫಿಟ್ ಆಗಿಡುವ ಜೊತೆಗೆ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ. ಇದು ಹೃದಯಾಘಾತ (Heart Attack) ಮತ್ತು ಮಧುಮೇಹ ನಿರ್ವಹಣೆ ಅಪಾಯವನ್ನು ತಡೆಯುತ್ತದೆ. ಪ್ರಸ್ತುತ ದಿನಗಳಲ್ಲಿಯೂ ಗ್ರಾಮೀಣ ಭಾಗದಲ್ಲಿನ ಪ್ರೌಢಶಾಲಾ ಮಕ್ಕಳ ಕಲಿಕೆಗೆ ಪೂರಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಕೂಡ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ಒದಗಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲೆ ಮತ್ತಷ್ಟು ಸನಿಹವಾಗಿದೆ. ಒಟ್ಟಾರೆಯಾಗಿ ಅಂದು-ಇಂದು-ಎಂದೆಂದೂ ಸೈಕಲ್ ವಿದ್ಯಾರ್ಥಿ ಮಿತ್ರ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಅಕ್ಷತಾ ಹೆಗ್ಡೆ