ವಿಶ್ವ ಟೆಸ್ಟ್ ಚಾಂಪಿನಯನ್ಷಿಪ್ ಫೈನಲ್: ಮಳೆಯಿಂದಾಗಿ 4ನೇ ದಿನದ ಆಟ ರದ್ದು; ಐತಿಹಾಸಿಕ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು

ಸೌತ್ಹ್ಯಾಂಪ್ಟನ್,ಜೂ.22: ಭಾರತ ಹಾಗೂ‌ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ವರುಣನ‌ ಅವಕೃಪೆ ಮುಂದುವರಿದಿದ್ದು, ಮಳೆಯ ಕಾರಣದಿಂದಾಗಿ ಪಂದ್ಯದ ನಾಲ್ಕನೇ‌ ದಿನದಾಟ ಒಂದು ಎಸೆತವೂ ಕಾಣದೆ ರದ್ದಾಗಿದೆ. ಹೀಗಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಪಂದ್ಯದ ಆರಂಭದ ದಿನವಾದ ಜೂ.18ರಂದು ಸಹ ವರುಣನ‌ ಅಬ್ಬರದಿಂದಾಗಿ ಮೊದಲ ದಿನದಾಟ ಸಂಪೂರ್ಣ ರದ್ದಾಗಿತ್ತು. ಆದರೆ‌ ಎರಡು ಹಾಗೂ ಮೂರನೇ ದಿನದಂದು ಮಳೆರಾಯನ ಆರ್ಭಟ ಕಡಿಮೆ‌ ಆಗಿದ್ದರಿಂದ ಪಂದ್ಯ ಆರಂಭಕ್ಕೆ ಸ್ವಲ್ಪಮಟ್ಟಿನ ಅವಕಾಶ ದೊರೆತಿದ್ದು, ಉಭಯ ತಂಡಗಳ ಆಟಗಾರರು, ಕೋಟ್ಯಾಂತರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು.

ಆದರೆ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಇಡೀ ದಿನ ಸುರಿದ ಮಳೆಯಿಂದಾಗಿ ಒಂದು ಎಸೆತವೂ ಕಾಣದೆ‌ ದಿನದಾಟವನ್ನು ರದ್ದು ಮಾಡಲಾಯಿತು. ಹೀಗಾಗಿ ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ಇದೀಗ ಡ್ರಾನತ್ತ ಮುಖ ಮಾಡಿದ್ದು, ಆಟಗಾರರು ಮತ್ತು ಅಭಿಮಾನಿಗಳಲ್ಲಿ ಭಾರೀ ನಿರಾಸೆ‌ ಮೂಡಿಸಿದೆ.

ನಾಲ್ಕು ದಿನಗಳ‌ ಆಟದಲ್ಲಿ ಈವರೆಗೂ ಕೇವಲ 141.1 ಓವರ್ ಬೌಲಿಂಗ್ ಮಾಡಿದ್ದು, ಭಾರತವನ್ನು ಮೊದಲ ಇನ್ನಿಂಗ್ಸ್ ನಲ್ಲಿ 217 ರನ್ಗಳಿಗೆ ಕಟ್ಟಿಹಾಕುವ ಮೂಲಕ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ರನ್ಗಳಿಸಿರುವ ನ್ಯೂಜಿಲೆಂಡ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಫೈನಲ್ ಪಂದ್ಯಕ್ಕಾಗಿ ಐಸಿಸಿ ಒಂದು ದಿನ ಹೆಚ್ಚುವರಿ ದಿನವನ್ನು ನಿಗದಿ ಮಾಡಿದ್ದರೂ, ನಾಲ್ಕು ದಿನಗಳ ಆಟದಲ್ಲಿ ಮಳೆಯ ಆರ್ಭಟ ಹೆಚ್ಚಿರುವ ಪರಿಣಾಮ ಎರಡೂ ತಂಡಗಳ ನಡುವಿನ ನಿರ್ಣಾಯಕ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಎರಡೂ ತಂಡಗಳ ನಡುವಿನ ಐತಿಹಾಸಿಕ ಪಂದ್ಯ ಡ್ರಾ ಅಥವಾ ಟೈ ಆದಲ್ಲಿ ಬಹುಮಾನದ ಹಣ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಂಟಿಯಾಗಿ ನೀಡುವುದಾಗಿ ಐಸಿಸಿ ಈಗಾಗಲೇ ಘೋಷಿಸಿದೆ. ವಿಶ್ವ ಕ್ರಿಕೆಟ್‌ನ ಹಿರಿಯಣ್ಣ ಐಸಿಸಿಯು ವಿಜೇತರಿಗೆ 1.6 ಮಿಲಿಯನ್ ಯು.ಎಸ್ ಡಾಲರ್ ಮತ್ತು ರನ್ನರ್ ಅಪ್ ತಂಡಕ್ಕೆ 800,000 ಯುಎಸ್ ಡಾಲರ್ ಪ್ರಶಸ್ತಿ ಘೋಷಿಸಿದೆ.

ಇನ್ನೊಂದು ಪಂದ್ಯವಾಡಿಸಿ: ಗವಾಸ್ಕರ್
ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಮತ್ತೊಂದು ಪಂದ್ಯವನ್ನಾಡಿಸಿ ವಿಜೇತರನ್ನು ಆಯ್ಕೆ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಎರಡು ತಂಡಗಳ ಪಾಲಿಗೆ ಐತಿಹಾಸಿಕ ಪಂದ್ಯವಾಗಿರುವ ಫೈನಲ್ ಪಂದ್ಯ ಡ್ರಾ ಆದಲ್ಲಿ ಜಂಟಿ‌ ವಿಜೇತರನ್ನು ಘೋಷಿಸುವುದು ಸೂಕ್ತವಲ್ಲ. ಹೀಗಾಗಿ ಫುಟ್ಬಾಲ್ ಮತ್ತು ಟೆನ್ನಿಸ್ ನಲ್ಲಿ ವಿಜೇತರ ಆಯ್ಕೆಗೆ ಪರ್ಯಾಯ ಮಾರ್ಗ ಇರುವಂತೆ ಫೈನಲ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡರೆ‌ ಎರಡೂ ತಂಡಗಳು ಸಹ ಇಂಗ್ಲೆಂಡ್ ನಲ್ಲೇ ವಾಸ್ತವ್ಯ ಹೂಡಲಿದ್ದು, 3-4 ದಿನಗಳ ಬಳಿಕ ಮತ್ತೊಂದು ಪಂದ್ಯ ಆಡಿಸಬೇಕು ಎಂದು ಸುನೀಲ್ ಗವಾಸ್ಕರ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Exit mobile version