ಪ್ರಪಂಚದ ಅತಿ ಎತ್ತರದ ಸೇತುವೆ ಕಮಾನು ನಿರ್ಮಾಣ: ಇತಿಹಾಸ ಸೃಷ್ಟಿ

ಜಮ್ಮು-ಕಾಶ್ಮೀರ, ಏ. 07: ಭಾರತದ ಎಂಜಿನಿಯರ್‌ಗಳು ಜಮ್ಮು ಕಾಶ್ಮೀರದ ಚೆನಬ್ ನದಿಗೆ ಪ್ರಪಂಚದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಕಮಾನು ನಿರ್ಮಿಸುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದು, ಭಾರತದ ಪ್ರಸಿದ್ಧಿಯನ್ನು ಪ್ರಪಂಚದಾದ್ಯಂತ ಹರಡಿದ್ದಾರೆ. ಬ್ರಿಡ್ಜ್‌ನ ಈ ಕಮಾನು ಫ್ರಾನ್ಸ್‌ನಲ್ಲಿರುವ ಐಫೆಲ್‌ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಎಂಜಿನಿಯರ್‌ಗಳಿಗೆ ಬಹಳ ಸವಾಲಿನ ಯೋಜನೆಯಾಗಿತ್ತು. ಉದ್ದಮ್‍ಪುರ-ಶ್ರೀನಗರ-ಬಾರಾಮುಲ್ಲಾ ಈ ಯೋಜನೆಯನ್ನು 2004ರಲ್ಲಿ ಪ್ರಾರಂಭಿಸಿದಾಗ ಕಠಿಣ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡರು.

1.3ಕಿ.ಮಿ ಉದ್ದವಿರುವ ಈ ಸೇತುವೆ ನಿರ್ಮಾಣದ ಉದ್ದೇಶ ಜಮ್ಮು ಕಾಶ್ಮೀರದ ಸಂಪರ್ಕ ವ್ಯವಸ್ಥೆಯು ಮತ್ತಷ್ಟು ಸುಲಭಗೊಳಿಸಲಿದೆ. ಉದ್ದಮ್‍ಪುರ- ಶ್ರೀನಗರ- -ಬಾರಾಮುಲ್ಲಾ ಯೋಜನೆ ಸೇರಿದಂತೆ ಒಟ್ಟು 1,486 ಕೋಟಿ ವೆಚ್ಚ ತಗುಲಿದೆ. ಕಮಾನಿನ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಕಾಂಕ್ರೀಟ್‍ನ್ನು ಹೆಚ್ಚು ಬಳಸಲಾಗಿದೆ. ಈ ಕಮಾನಿನ ಭಾರ 10,619 ಮೆಟ್ರಿಕ್ ಟನ್ ಹೊಂದಿದೆ. ಕಮಾನನ್ನು ಮೊದಲ ಬಾರಿಗೆ ಓವರ್‌ಹೆಡ್‌ ಕೇಬಲ್ ಕ್ರೇನ್ ಬಳಸಿ ಪೂರ್ಣಗೊಳಿಸಲಾಗಿದೆ. ಇದು ಭಾರತದ ರೈಲ್ವೆ ಇಲಾಖೆಯಲ್ಲಿ ಮೊದಲ ಪ್ರಯತ್ನ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಹೆಜ್ಜೆ ಭಾರತದ ಆಧುನಿಕ ನಿರ್ಮಾಣ ವ್ಯವಸ್ಥೆ ಹಾಗೂ ತಂತ್ರಜ್ಞಾನದಲ್ಲಿನ ಶಕ್ತಿ ಪ್ರದರ್ಶನದ ರೂಪ ಮಾತ್ರವಲ್ಲದೇ, ಕೆಲಸದ ಕ್ರಮದಲ್ಲಾದ ಬದಲಾವಣೆಗೆ ಉತ್ತಮ ನಿದರ್ಶನವಾಗಿ ನಿಂತಿದೆ. ಸಂಕಲ್ಪವೊಂದಿದ್ದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದು ತೋರಿಸಿಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದು ಭಾರತದ ಹೆಮ್ಮೆಯ ಕ್ಷಣ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಪರ್ಕ ಕಲ್ಪಿಸುವ ಕಮಾನು ನಿರ್ಮಾಣ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್ ಟ್ವೀಟ್ ಮಾಡಿದ್ದಾರೆ. 5.6 ಮೀಟರ್‌ನ ಕೊನೆಯ ಕಬ್ಬಿಣದ ತುಂಡನ್ನು ಕಮಾನಿನ ತುತ್ತತುದಿಗೆ ಸೋಮವಾರ ಜೋಡಿಸಲಾಯಿತು ಎಂದು ರೈಲ್ವೆ ಸಚಿವಾಲಯ ತಿಳಿಸಿತು.

Exit mobile version