ಕೊರೊನಾ ಲಸಿಕೆ ಹಂಚುತ್ತಿರುವ ಬಾರತದ ನಡೆಗೆ ವಿಶ್ವದಾದ್ಯಂತ ಶ್ಲಾಘನೆ

ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಯನ್ನು ಜಗತ್ತಿನ ಇತರ ದೇಶಗಳಿಗೆ ನೀಡುತ್ತಿರುವ ಭಾರತದ ನಡೆಗೆ ವಿಶ್ವಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ಭಾರತದ ‘ವ್ಯಾಕ್ಸಿನ್ ಮೈತ್ರಿ’ ಆಶಯವು ಹಲವು ದೇಶಗಳ ಜತೆ ಸಂಬಂಧ ಸುಧಾರಣೆಗೆ ಕಾರಣವಾಗುತ್ತಿದೆ. ಅದೇ ಸಾಲಿಗೆ ಸೇರಿದೆ ವೆಸ್ಟ್ ಇಂಡೀಸ್. ವಿಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಅವರುಗಳು ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತವು ರಾಜಧರ್ಮವನ್ನು ಪಾಲಿಸುತ್ತಿದೆ. ಇದೇ ನಿಜವಾದ ನಾಯಕನ ಕರ್ತವ್ಯ ಎಂದು ವಿವಿಧ ದೇಶಗಳ ನಾಯಕರು, ಖ್ಯಾತನಾಮರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ.

ಭಾರತವು ಕೊರೊನಾ ಲಸಿಕೆಯನ್ನು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ, ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಕೆರಿಬಿಯನ್ ಪ್ರಾಂತ್ಯದ ದ್ವೀಪರಾಷ್ಟ್ರಗಳಿಗೂ ಭಾರತದ ಕೊರೊನಾ ಲಸಿಕೆ ದೊರೆತಿದೆ. ಮಾರ್ಚ್ ತಿಂಗಳಲ್ಲಿ ಆ್ಯಂಟಿಗುವಾ ಮತ್ತು ಬರ್ಬುಡಾ ದೇಶಗಳಿಗೆ ಭಾರತ 1,75,000 ಡೋಸ್ ಕೊರೊನಾ ಲಸಿಕೆಯನ್ನು ವಿತರಿಸಿದೆ. ಈ ಪೈಕಿ 40,000 ಡೋಸ್ ಲಸಿಕೆಗಳು ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ ಬರ್ಬುಡಾಗೆ ಉಚಿತವಾಗಿ ನೀಡಿದೆ. ಗಯಾನಾಕ್ಕೆ 80,000 ಡೋಸ್ ಲಸಿಕೆಯನ್ನು ವ್ಯಾಕ್ಸಿನ್ ಮೈತ್ರಿ ಯೋಜನೆಯಿಂದ ದೊರೆತಿದೆ. ಅಲ್ಲದೆ, ಜಮೈಕಾ, ಬಾರ್ಬೊಡಾಸ್, ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ ಮತ್ತು ನವಿಸ್ ದ್ವೀಪಸಮೂಹಗಳಿಗೂ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ ತಲುಪಿದೆ. ಸ್ವಯಂ ಕೊರೊನಾ ಲಸಿಕೆ ಉತ್ಪಾದಿಸುವಷ್ಟು ಮುಂದುವರೆಯದ ಈ ದೇಶಗಳು ಭಾರತದ ಉಪಕಾರವನ್ನು ಶ್ಲಾಘಿಸಿವೆ.

ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿವೆ. ಬೇರೆ ಬೇರೆ ದೇಶಗಳಿಗೆ ಕೊವಿಡ್​ 19 ಲಸಿಕೆ ವಿತರಿಸಿದ್ದ ಭಾರತ ಇದೀಗ ತನ್ನ ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಲಸಿಕೆ ಪೂರೈಸಿದೆ. ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಿರುವ ಭಾರತ, ಗ್ಲೋಬಲ್ ಅಲೆಯನ್ಸ್ ಫಾರ್ ವ್ಯಾಕ್ಸಿನ್ ಇಮ್ಯೂನೈಜೇಶನ್ (GAVI) ಅಡಿ ಲಸಿಕೆ ನೀಡಿದೆ.

Exit mobile version