Mysore: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ವರುಣಾದಲ್ಲಿ ಮಡಿವಾಳ ಸಮುದಾಯವನ್ನು ಸಂಘಟನೆ ಮಾಡುವ ದೃಷ್ಟಿಯಿಂದ ಮಡಿವಾಳ ಸಮಾಜದ ಸಭೆಯಲ್ಲಿ ಉಚಿತವಾಗಿ ಐರನ್ ಬಾಕ್ಸ್ ಮತ್ತು ಕುಕ್ಕರ್ಗಳನ್ನು ಹಂಚಿದ್ದೆವು ಎಂದು ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ನೀಡಿರುವ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿದ್ದು ವಿವಾದಕ್ಕೆ ಕಾರಣವಾಗಿದೆ.

ನಂಜನಗೂಡಿನಲ್ಲಿ ನಡೆದ ತಾಲ್ಲೂಕು ಮಡಿವಾಳರ ಸಮುದಾಯ ಭವನದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ವರುಣದಲ್ಲಿ (Varuna) ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಬೇಕೆಂದು, ಜನರನ್ನು ಸೇರಿಸಿ ಅವರೆಲ್ಲರಿಗೂ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ನೀಡಲಾಗಿತ್ತು. ಮಡಿವಾಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು. ನಮ್ಮ ತಂದೆಗೆ ಸಹಾಯವಾಗಲೆಂದು ನಂಜಪ್ಪ ಈ ಕಾರ್ಯಕ್ರಮ ಮಾಡಿದ್ದರು. ನಂಜಪ್ಪನವರು ಪಟ್ಟು ಬಿಡದೇ ನನ್ನ ತಂದೆಯವರಿಂದಲೇ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ಕೊಡಿಸಿ ಕಾರ್ಯಕ್ರಮ ಯಶಸ್ವಿಯಾಗಿಸಿದ್ದರು. ಹೀಗಾಗಿಯೇ ಮಡಿವಾಳಸಮಾಜದ ಮತಗಳು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕವು. ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದಿದ್ದರಿಂದ ಆ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವೈರಲ್ ಆಗಿದೆ.

ಯತೀಂದ್ರ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಒತ್ತಾಯಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಅರ್ಜಿ ವಿಚಾರಣೆ ಬಾಕಿ ಇದ್ದು, ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಾಬೀತುಪಡಿಸಲು ಪುರಾವೆಗಳಿದ್ದರೆ, ಚುನಾವಣಾ ಆಯೋಗ ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಉಚಿತ ವಿತರಣೆಯು ಗಂಭೀರ ಅಪರಾಧವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯನವರಂತಹ ಹಿರಿಯ ನಾಯಕರು ಕೂಡಾ ಉಚಿತವಾಗಿ ಐರನ್ ಬಾಕ್ಸ್ (Ironbox) ಮತ್ತು ಕುಕ್ಕರ್ಗಳನ್ನು (Cooker) ಹಂಚಿ ಗೆಲ್ಲಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂಬ ಮಾತುಗಳು ಕೇಳಿ ಬಂದಿವೆ.