ಮೇ ಎರಡನೇ ವಾರದೊಳಗೆ ಮುಖ್ಯಮಂತ್ರಿಗಳ ಬದಲಾವಣೆ : ಬಸವನಗೌಡ ಯತ್ನಾಳ್!

basavanagowda

ಮೊನ್ನೆಯಿಂದಲೂ ರಾಜ್ಯದ ಬಿಜೆಪಿಯೊಳಗೆ ಸಿಎಂ ಸ್ಥಾನ ಬದಲಾವಣೆ ಕುರಿತು ವದಂತಿಗಳು ಹರಿದಾಡುತ್ತಲೇ ಇದೆ. ಈ ಊಹಪೋಹಗಳಿಗೆ ಸಾಕ್ಷಿಯಂತೆ ವಿಜಯಪುರ(Vijayapura) ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yatnal) ಮೇ 10ರೊಳಗೆ ಸಿಎಂ ಬದಲಾವಣೆ ಆಗಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ.

ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವರಾದ ಅಮಿತ್ ಶಾ(Amit shah) ಅವರು ಇಂದು ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದಾರೆ. ಪಕ್ಷದ ಒಗ್ಗಟ್ಟು ಮತ್ತು ದೃಢ ನಿರ್ಧಾರಗಳನ್ನು ಸೂಚಿಸಲು, ಒಳಿತಿನ ನಿರ್ಣಯ ನೀಡಲು ಜೊತೆಗಿದ್ದಾರೆ. ಸಿಎಂ(CM) ಬಸವರಾಜ್ ಬೊಮ್ಮಾಯಿ(Basavaraj Bommai) ಅವರ ಮನೆಗೆ ಭೇಟಿ ನೀಡಿದ್ದು, ಪಕ್ಷದವರನ್ನು ಒಟ್ಟುಗೂಡಿಸಿ ಒಂದಿಷ್ಟು ಚರ್ಚೆ ನಡೆಸುತ್ತಾರೆ. ಸೋಮವಾರ ನವದೆಹಲಿಯಲ್ಲಿ ಹೈಪವರ್ ಸಭೆ ನಡೆಸಲಾಗಿದೆ. ಅಂತಿಮ ತೀರ್ಮಾನವನ್ನು ಪ್ರಧಾನಿ ಮೋದಿ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಇನ್ನು ಸಿಎಂ ಬದಲಾವಣೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಕೊಟ್ಟ ಹೇಳಿಕೆಗೆ ಪ್ರತಿಕ್ರಿಯೇ ನೀಡಿದ ಯತ್ನಾಳ್ ಅವರು, ಸಿಎಂ ಬದಲಾವಣೆಯಾದರೆ ಇಬ್ಬರಿಗೆ ತೊಂದರೆ ಎದುರಾಗುತ್ತದೆ ಎಂಬ ಭಯ ಆವರಿಸಿದೆ. ಒಬ್ಬರಿಗೆ ಜೈಲಿಗೆ ಹೋಗುವ ಭಯ ಹುಟ್ಟಿಕೊಂಡರೆ, ಮತ್ತೊಬ್ಬರಿಗೆ ಸಿಎಂ ಆಗಲ್ಲ ಎಂಬ ಭಯ ಕಾಡುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಗುಡುಗಿದರು. ಬಸವ ಜಯಂತಿ ಹಬ್ಬದ ಪ್ರಯುಕ್ತ ವಿಜಯಪುರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕಾರಣ ನಾನು ಔತಣಕೂಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಮಧ್ಯೆ ರಾಜಕೀಯ ವಲಯದಲ್ಲಿ ನಾಯಕತ್ವ ಬದಲಾವಣೆಗಾಗಿ ಅಮಿತ್ ಶಾ ಭೇಟಿ ನೀಡಿರಬಹುದಾ? ಎಂಬ ಅನೇಕ ಪ್ರಶ್ನೆಗಳು, ವದಂತಿಗಳು ಪ್ರಸ್ತಾಪವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ, ಸಿಎಂ ಸ್ಥಾನ ಬದಲಾವಣೆ ಕುರಿತು ಕೇಳಿಬರುತ್ತಿರುವ ಸುದ್ದಿಗಳು ಸುಳ್ಳು! ಆ ರೀತಿ ಯಾವುದು ಇಲ್ಲ ಎಂದು ವದಂತಿಗಳಿಗೆ ತೆರೆಎಳೆದರು.

Exit mobile version