ಕುರ್ಚಿಗಾಗಿ ರಾಜಕೀಯ ಲಾಭ ಪಡೆಯುವುದಿಲ್ಲ : ಯೋಗಿ ಆದಿತ್ಯನಾಥ್!

ನಾವು ಯಾವುದೇ ಕಾರಣಕ್ಕಾಗಿ ರಾಜಕೀಯ ಲಾಭ ಪಡೆಯುವುದಿಲ್ಲ. ಕುರ್ಚಿ ಅಥವಾ ಅಧಿಕಾರದ ಹಿಂದೆ ನಾವು ಓಡಾಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸಲು ಲಖಿಂಪುರ ಖೇರಿ ಘಟನೆಯನ್ನು ಜಲಿಯನ್ ವಾಲಾ ಹತ್ಯಾಕಾಂಡಕ್ಕೆ ಹೋಲಿಸಲಾಗುತ್ತಿದೆ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಈ ವಿಷಯದಲ್ಲಿ ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಮತ್ತು ಚುನಾವಣೆಯಲ್ಲಿ ಈ ವಿಷಯದಿಂದ ರಾಜಕೀಯ ಲಾಭ ಪಡೆಯಲು ಪ್ರತಿಪಕ್ಷಗಳ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.


ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಆದಿತ್ಯನಾಥ್ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಖಚಿತ, ಇತರ ಪಕ್ಷಗಳು ಎರಡನೇ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಹೋರಾಡುತ್ತಿವೆ ಎಂದರು. ಅಲ್ಲದೇ ಗೋರಖ್ಪುರ ನಗರ ಸ್ಥಾನದಿಂದ ನನ್ನ ಸ್ಪರ್ಧೆಯ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ ಎಂದು ಹೇಳಿದ್ದಾರೆ. ಪ್ರಧಾನಿಯಾಗುವ ಇಚ್ಛೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಬಿಜೆಪಿಯ ಸರಳ ಕಾರ್ಯಕರ್ತ, ನನಗೆ ನೀಡಿದ ಕೆಲಸವನ್ನು ನಿರ್ವಹಿಸುತ್ತೇನೆ. ನಾನು ಎಂದಿಗೂ ಯಾವುದೇ ಹುದ್ದೆ ಅಥವಾ ಕುರ್ಚಿಯ ಹಿಂದೆ ಓಡುವುದಿಲ್ಲ” ಎಂದಿದ್ದಾರೆ.


ಕ್ರಿಮಿನಲ್ಗಳು, ಮಾಫಿಯಾಗಳು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುವವರಿಗೆ ಟಿಕೆಟ್ ಹಂಚುವ ಸಮಾಜವಾದಿ ಪಕ್ಷ ಸ್ವಲ್ಪವೂ ಬದಲಾಗಿಲ್ಲ ಎಂಬುದನ್ನು ಈ ಬಾರಿಯೂ ಅವರು ಸಾಬೀತುಪಡಿಸಿದ್ದಾರೆ ಎಂದರು. ಅಧಿಕಾರಕ್ಕೆ ಮರಳಿದ ನಂತರ ಅಪರಾಧಿಗಳು ಮತ್ತು ಮಾಫಿಯಾಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಪ್ರತಿಪಾದಿಸಿದ ಆದಿತ್ಯನಾಥ್, “ಒಂದು ಕೈಯಲ್ಲಿ ಅಭಿವೃದ್ಧಿಯ ಕೋಲು ಇರುತ್ತದೆ. ಇನ್ನೊಂದು ಕೈ ಸಮಾಜ ವಿರೋಧಿ ಶಕ್ತಿಗಳ ಮೇಲೆ ಬುಲ್ಡೋಜರ್ ಓಡಿಸುತ್ತದೆ” ಎಂದು ಹೇಳಿದ್ದಾರೆ.

Exit mobile version